ADVERTISEMENT

ಚುರುಮುರಿ: ರಿಪೇರಿ ಗೃಹ ಪ್ರವೇಶ

ಮಣ್ಣೆ ರಾಜು
Published 20 ಸೆಪ್ಟೆಂಬರ್ 2022, 17:18 IST
Last Updated 20 ಸೆಪ್ಟೆಂಬರ್ 2022, 17:18 IST
   

ಪದ್ಮಾ, ಪರಮೇಶಿ ಬಂದು, ‘ಗೃಹ ಪ್ರವೇಶಕ್ಕೆ ಕುಟುಂಬ ಸಮೇತರಾಗಿ ಬನ್ನಿ...’ ಎಂದು ಇನ್ವಿಟೇಷನ್ ಕೊಟ್ಟರು.

‘ಇನ್ನೊಂದು ಮನೆ ಕಟ್ಟಿಸಿದ್ದೀರಾ?’ ಕಾಫಿ ಕೊಡುತ್ತಾ ಸುಮಿ ಕೇಳಿದಳು.

‘ಇಲ್ಲಾರೀ, ರಿಪೇರಿ ಗೃಹದ ಪ್ರವೇಶ’ ಅಂದಳು ಪದ್ಮಾ.

ADVERTISEMENT

‘ಹೌದು, ರಾಜಕಾಲುವೆ ಮೇಲೆ ಕಟ್ಟಿದ್ವಿ ಅಂತ ಬಿಬಿಎಂಪಿ ಬುಲ್ಡೋಜರ್ ನುಗ್ಗಿ ಮನೆಯ ಕಿಟಕಿ, ಬಾಗಿಲು, ಗೋಡೆ ಕೆಡವಿ ಹೋಗಿತ್ತು, ರಿಪೇರಿ ಮಾಡಿಸಿ ಮನೆಗೆ ಪುನರ್‌ಪ್ರವೇಶ ಮಾಡ್ತಿದ್ದೀವಿ...’ ಪರಮೇಶಿ ನೊಂದು ಹೇಳಿದ.

‘ಕಾಲುವೆ ಮೇಲೆ ಮನೆ ಕಟ್ಟೋದು ತಪ್ಪಲ್ವಾ?’ ಅಂದ ಶಂಕ್ರಿ.

‘ಕಾಲುವೆ ಮೇಲೆ ಲೇಔಟ್ ಮಾಡಿ, ಮನೆ ಕಟ್ಟಲು ಪರ್ಮಿಷನ್ ಕೊಟ್ಟ ಅಧಿಕಾರಿಗಳದ್ದು ತಪ್ಪು’.

‘ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಕೊಡಿಸಿ’ ಶಂಕ್ರಿಗೆ ಸಿಟ್ಟು ಬಂತು.

‘ಸರ್ಕಾರಿ ಕಚೇರಿಯಲ್ಲಿ ಕಡತ ಹುಡುಕೋದೇ ಕಷ್ಟ, ಇನ್ನು ಅಧ್ವಾನ ಮಾಡಿಹೋದ ಅಧಿಕಾರಿಗಳನ್ನು ಹುಡುಕೋದು ಸುಲಭಾನಾ?’ ಅಂದ ಪರಮೇಶಿ.

‘ಲೋನ್ ಕೊಡ್ತೀವಿ ಮನೆ ರಿಪೇರಿ ಮಾಡಿಸಿಕೊಳ್ಳಿ ಅಂತ ಬ್ಯಾಂಕಿನವರೇ ಮನೆ ಬಾಗಿಲಿಗೆ ಬಂದಿದ್ದರು. ಅದೇ ಟೈಮಿಗೆ ಕಂಟ್ರಾಕ್ಟರ್ ಬಂದು, ಮಳೆನೀರು, ಬುಲ್ಡೋಜರ್ ನುಗ್ಗದಂತೆ ಮನೆಯನ್ನು ರಿಪೇರಿ ಮಾಡಿಕೊಡ್ತೀನಿ ಅಂದ್ರು... ರಿಪೇರಿ ಗುತ್ತಿಗೆ ವಹಿಸಿದರೆ ಗೃಹ ಪ್ರವೇಶ ಫ್ರೀ ಅಂತ ಆಫರ್ ಕೊಟ್ಟರು’ ಅಂದಳು ಪದ್ಮಾ.

‘ಕಂಟ್ರಾಕ್ಟರ್‌ಗೆ ಲಾಸ್ ಆಗೋದಿಲ್ವಾ?’

‘40 ಪರ್ಸೆಂಟ್ ಕೊಟ್ಟು ಸರ್ಕಾರಿ ಕಾಮಗಾರಿ ಮಾಡೋದಕ್ಕಿಂತ ನಮ್ಮಂಥವರ ಮನೆ ಕಟ್ಟಿ ಗೃಹ ಪ್ರವೇಶ ಮಾಡಿಕೊಡೋದು ಪ್ರಯೋಜನಕಾರಿ ಅಂತ ಕಂಟ್ರಾಕ್ಟರ್ ಹೇಳಿದರು’ ಎಂದ ಪರಮೇಶಿ.

‘ಚಪ್ಪರ, ಶಾಮಿಯಾನ, ಪುರೋಹಿತರು, ಅಡುಗೆ ಎಲ್ಲವನ್ನೂ ಕಂಟ್ರಾಕ್ಟರ್ ವಹಿಸಿಕೊಂಡಿದ್ದಾರೆ. ಗೃಹ ಪ್ರವೇಶಕ್ಕೆ ಬಂದವರಿಂದ ಮುಯ್ಯಿ ಈಸ್ಕೊಂಡು, ತಾಂಬೂಲ ಕೊಡೋದಷ್ಟೇ ನಮ್ಮ ಕೆಲಸ...’ ಪದ್ಮಾ ಸಡಗರದಿಂದ ಹೇಳಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.