ADVERTISEMENT

ಚುರುಮುರಿ| ದುಡ್ಡಾಲದ ಮರ!

ತುರುವೇಕೆರೆ ಪ್ರಸಾದ್
Published 22 ಜೂನ್ 2022, 19:31 IST
Last Updated 22 ಜೂನ್ 2022, 19:31 IST
Churumuri==23062022
Churumuri==23062022   

ಹರಟೆಕಟ್ಟೇಲಿ ಎಸಿಬಿ ರೈಡ್ ಬಗ್ಗೆ ಚರ್ಚೆ ನಡೀತಿತ್ತು: ‘ಪರವಾಗಿಲ್ಲ ಕಣೋ, ಎಸಿಬಿ ರೈಡೂ ಈಚೆಗೆ ವೈವಿಧ್ಯಮಯವಾಗಿದೆ’ ಎಂದ ಪರ್ಮೇಶಿ.

‘ಎಲ್ಲಾ ಲಂಚನೇ! ಅದರಲ್ಲಿ ವೈವಿಧ್ಯಮಯ ಏನ್ ಬಂತು ಮಣ್ಣು’ ಕೊಂಕು ತೆಗೆದ ಈರಭದ್ರ.

‘ಲಂಚನೇ ಆದ್ರೂ ಅದನ್ನ ವಿವಿಧ ರೂಪಗಳಲ್ಲಿ, ವಿವಿಧ ಆಕಾರಗಳಲ್ಲಿ, ವಿವಿಧ ಪಾತ್ರಗಳಲ್ಲಿ ಅಡಗಿಸಿಟ್ಟಿರೋದು ವೈವಿಧ್ಯನೇ ಅಲ್ಲವಾ?’ ಎಂದ ಜಾಣೇಶ.

ADVERTISEMENT

‘ಹೌದೌದು, ಮನೆ ಕಬೋರ್ಡು, ಕಮೋಡು, ಕಾರಿನ ಡ್ಯಾಶ್‍ಬೋರ್ಡು, ಬ್ಯಾಂಕು, ಬಂಕು, ನೀರಿನ ಪೈಪು, ಕಸದ ತೊಟ್ಟಿ, ಕಾರ್ ಟೈರು, ಕೊನೆಗೆ ಕಿಡ್ನಿ, ಲಿವರ್‍ರು, ಹೊಟ್ಟೆ, ಲಂಗ್ಸಲ್ಲೂ ಚಿನ್ನ, ದುಡ್ಡು ಇಡೋ ಹೊಸ ಮಾರ್ಗಗಳನ್ನ ಅವಿಷ್ಕಾರ ಮಾಡಿರೋದು ಏಕತೆಯಲ್ಲಿ ವೈವಿಧ್ಯನೇ ಬಿಡು’.

‘ನಾನು ಹೇಳಿದ್ದು ಈ ವೈವಿಧ್ಯ ಅಲ್ಲ’ ಗಂಭೀರವಾಗಿ ಗುಡುಗಿದ ಪರ್ಮೇಶಿ.

‘ಮತ್ತೆ ಇನ್ಯಾವ ವೈವಿಧ್ಯ?’

‘ನೋಡ್ರೋ, ಮೊದ್ಲೆಲ್ಲಾ ಬರೀ ಇಂಜಿನಿಯರ್‌ಗಳು, ಪೊಲೀಸ್ನೋರು, ಸಬ್ ರಿಜಿಸ್ಟ್ರಾರ್‌ಗಳು ಸಿಕ್ಕಾಪಟ್ಟೆ ಆಸ್ತಿ ಮಾಡಿ ಸಿಕ್ಕಿಬೀಳ್ತಿದ್ರು. ಈಗ ನೋಡಿ, ಅವರ ಜೊತೆಗೆ ಬೇರೆಯವರಿಗೂ ಇದರಲ್ಲಿ ಪ್ರಾತಿನಿಧ್ಯ ಸಿಕ್ತಿದೆ. ಬರೀ ಆಸ್ತಿ ನೊಂದಣಿ ಮಾಡೋ ರಿಜಿಸ್ಟ್ರಾರ್‌ಗಳು ಮಾತ್ರ ಈ ಗುಂಪಲ್ಲಿದ್ರು. ಈಗ ಮೌಲ್ಯಮಾಪನ ಮಾಡೋ ಯೂನಿವರ್ಸಿಟಿ ರಿಜಿಸ್ಟ್ರಾರ್‌ಗಳೂ ಅಪಮೌಲ್ಯ ಆಗೋಗಿದಾರೆ. ಮಹಿಳಾ ಕಲ್ಯಾಣದೋರೂ ಲಂಚ ಅಭಿವೃದ್ಧಿಗೆ ಕೈ ಜೋಡ್ಸಿದಾರೆ’.

‘ಹೌದೌದು, ಲಾಲೂ ತರ ಮೇವು ತಿನ್ನೋರೂ ಪಶು ವಿ.ವಿ.ಲಿ ತಗಲಾಕ್ಕೊಂಡಿದಾರೆ’.

‘ಅದೇನ್ ಹೇಳ್ತೀಯ? ಬಿಡಿಎ ತೋಟದ ಮಾಲಿ ಒಬ್ರು ಆದಾಯ ಮೀರಿ ಸೈಟು, ಬಂಗ್ಲೆ ಎಲ್ಲಾ ಮಾಡ್ಕೊಂಡಿದಾರೆ. ದುಡ್ಡೇನು ಮರದಿಂದ ಉದ್ರುತ್ತಾ ಅಂತಿದ್ರಲ್ಲ, ನೋಡು ಈಗ ಅದನ್ನೂ ನಿಜ ಮಾಡಿ ಎಂತಹ ಸಾಧನೆ ಮಾಡಿದಾರೆ. ದೊಡ್ಡಾಲದ ಮರದ ಥರ ‘ದುಡ್ಡಾಲದ ಮರ’ ಅನ್ನೋ ತಳಿನೇ ಕಂಡ್‌ಹಿಡಿತಾರೇನೋ?’

‘ಮಾಲಿಯಾದರೇನು ಶಿವ, ಗಾಲಿಯಾದರೇನು ಶಿವ ಎಲ್ಲೆಲ್ಲೂ ಲಂಚವೇ ಶಿವ’ ಎಂದು ಹಾಡುತ್ತಾ ಪಂಚೆ ಕೊಡವಿ ಮೇಲೆದ್ದ ಜಾಣೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.