ADVERTISEMENT

ಚುರುಮುರಿ: ಗಂಡ-ಗುಂಡಿ

ಮಣ್ಣೆ ರಾಜು
Published 15 ಸೆಪ್ಟೆಂಬರ್ 2022, 19:31 IST
Last Updated 15 ಸೆಪ್ಟೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ನಿಮ್ಮ ಮಗ ತುಂಬಾ ಕೆಟ್ಟಿದ್ದಾರೆ, ಇನ್‍ಟೈಂಗೆ ಮನೆಗೆ ಬರ್ತಿಲ್ಲ. ನನ್ನ ಜೊತೆ ಕಷ್ಟಸುಖ ಮಾತನಾಡ್ತಿಲ್ಲ, ಆಫೀಸಿಗೆ ಹೋಗ್ತೀನಿ ಅಂತ ದಿನಾ ಬೆಳಿಗ್ಗೆ ಬೇಗ ಹೋಗ್ತಾರೆ, ಸಂಜೆ ತೀರಾ ತಡವಾಗಿ ಬರ್ತಾರೆ. ಅದೆಲ್ಲಿಗೆ ಹೋಗ್ತಾರೋ ಕೇಳಿ...’

ಮಾವನಿಗೆ ಸೊಸೆ ಸುಮಿ ಕಂಪ್ಲೇಂಟ್ ಹೇಳಿ ಕಣ್ಣು ಒರೆಸಿಕೊಂಡಳು.

‘ಹೌದೇನೋ ಶಂಕ್ರಿ? ಸಂಸಾರ ಕಟ್ಟಿಕೊಂಡು ಹೀಗೆ ದಾರಿ ತಪ್ಪೋದು ಸರಿಯೇನೋ?’ ಮಲ್ಲಣ್ಣ ರೇಗಿದ.

ADVERTISEMENT

‘ಹೌದಪ್ಪ, ಆಫೀಸಿಗೆ ದಿನಾ ತಡವಾಗಿ ಹೋಗ್ತಿದ್ದೆ, ಅದ್ಕೆ ಬಾಸ್ ಬೆಳಿಗ್ಗೆ ಬೇಗ ಮನೆ ಬಿಡು, ಇಲ್ಲವಾದರೆ ಕೆಲಸ ಬಿಡು ಅಂತ ಹೇಳಿದ್ದಾರೆ. ಕೆಲ್ಸ ಬಿಡಬೇಕೋ, ಮನೆ ಬಿಡಬೇಕೋ ನೀವೇ ಹೇಳಿ’ ಅಂದ ಶಂಕ್ರಿ.

‘ನಿಮ್ಮ ಬಾಸ್‍ಗೆ ಮನೆಮಠ ಇಲ್ವಂತಾ?’

‘ಇವರು ತಪ್ಪು ಮಾಡಿ ಬಾಸ್ ಮೇಲೆ ಹೇಳ್ತಿದ್ದಾರೆ. ನನಗೇನೋ ಇವರು ಅಡ್ಡದಾರಿ ಹಿಡಿದಿದ್ದಾರೆ ಅನಿಸಿಬಿಟ್ಟಿದೆ...’ ಸುಮಿ ಗೊಳೋ ಅಂದಳು.

‘ಅಡ್ಡದಾರಿ ಹಿಡಿದಿರೋದು ನಿಜವೇನೋ?’

‘ನಿಜ. ಮೊದಲು ಮಲ್ಲಿಗೆ ರಸ್ತೆಯಲ್ಲಿ ಹೋಗ್ತಿದ್ದೆ, ಈಗ ಸಂಪಿಗೆ ರಸ್ತೆಯಲ್ಲಿ ಓಡಾಡ್ತಿದ್ದೇನೆ’.

‘ಯಾಕೆ ದಾರಿ ತಪ್ಪಿದೆ?’ ಮಲ್ಲಣ್ಣ ಕೇಳಿದ.

‘ಮಲ್ಲಿಗೆ ರಸ್ತೆಯಲ್ಲಿ ಮೊಳಕಾಲುದ್ದದ ಗುಂಡಿಗಳು ಬಿದ್ದಿವೆ. ಬೈಕಿನಲ್ಲಿ ಗುಂಡಿ ಇಳಿದು-ಹತ್ತಿ ಹೋಗಲು ಯಮಯಾತನೆ. ಚಿಕ್ಕ ಗುಂಡಿಗಳಿರುವ ಸಂಪಿಗೆ ರಸ್ತೆ, ಸಣ್ಣ ರಸ್ತೆಗಳಲ್ಲಿ ಸುತ್ತಿಬಳಸಿ ಹೋಗಿಬರೋದರಿಂದ ತಡವಾಗುತ್ತೆ’ ಅಂದ ಶಂಕ್ರಿ.

ಮಲ್ಲಣ್ಣನಿಗೆ ಶಂಕ್ರಿ ಪರಿಸ್ಥಿತಿ ಅರ್ಥವಾಯಿತು. ‘ಸಾರ್ವಜನಿಕ ಸಮಸ್ಯೆಯಾಗಿರುವ ರಸ್ತೆಗುಂಡಿಗಳು ಸಾಂಸಾರಿಕ ಸಮಸ್ಯೆಯೂ ಆಗಿಬಿಟ್ಟವಲ್ಲಾ’ ಅಂತ ಬೇಸರವೂ ಆಯಿತು.

‘ಇದು ಗಂಡ-ಗುಂಡಿ ಸಮಸ್ಯೆ. ಗಂಡ ಕೆಟ್ಟಿಲ್ಲ, ರಸ್ತೆಗಳು ಕೆಟ್ಟಿವೆ... ಗುಂಡಿ ಮುಚ್ಚಿ ರಸ್ತೆಗಳು ರಿಪೇರಿ ಆದ್ಮೇಲೆ ಗಂಡನೂ ರಿಪೇರಿ ಆಗ್ತಾನೆ ಧೈರ್ಯವಾಗಿರು...’ ಎಂದು ಮಲ್ಲಣ್ಣ ಸೊಸೆಗೆ ಸಮಾಧಾನ ಹೇಳಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.