ADVERTISEMENT

ಚುರುಮುರಿ: ಗಡಿಯಾಚೆ ಸಂಡಿಗೆ!

ತುರುವೇಕೆರೆ ಪ್ರಸಾದ್
Published 3 ಮೇ 2025, 0:30 IST
Last Updated 3 ಮೇ 2025, 0:30 IST
...
...   

ಪರ್ಮೇಶಿ ಬೆಳಿಗ್ಗೆ ಪೇಪರ್ ಓದುತ್ತಾ ಕುಳಿತಿದ್ದಾಗ ಭಾರಿ ಎತ್ತರದ ಧ್ವನಿಯಲ್ಲಿ ಯಾರೋ ಜಗಳ
ಆಡುತ್ತಿರುವುದು ಕೇಳಿಸಿತು. ‘ಏನೇ ಅದು ಗಲಾಟೆ?’ ಹೆಂಡತಿ ಪದ್ದುವನ್ನು ವಿಚಾರಿಸಿದ.

‘ಇನ್ನೇನು, ಮಾಮೂಲಿ ಎಣ್ಣೆ ಯುದ್ಧ. ಯಾರಿಗೋ ರಾತ್ರಿ ಎಣ್ಣೆ ಜಾಸ್ತಿಯಾಗಿ ಬೆಳಗ್ಗೆ ಜಗಳ ತೆಗೆದಿರ್ಬೇಕು’ ಅಂದ್ಲು ಪದ್ದು.

‘ಇಲ್ಲ ಕಣೆ, ಗಂಡಸರ ಜೊತೆ ಹೆಂಗಸರ ವಾಯ್ಸೂ ಇದೆ. ಇದು ಎಣ್ಣೆ ಯುದ್ಧ ಅಲ್ಲ, ಗಡಿರೇಖೆಗೆ ಸಂಬಂಧಿಸಿದ್ದು ಇರ್ಬೇಕು’.

ADVERTISEMENT

‘ಗಡಿರೇಖೆ ಇಲ್ಯಾಕೆ ಬರುತ್ತೆ?’

‘ಅಯ್ಯೋ! ಸಿಟೀಲಿ ಕನ್ಸರ್‍ವೆನ್ಸಿ ಗಲ್ಲಿಗಳು, ಹಿತ್ತಲು, ಸೈಟು, ಹಳ್ಳೀಲಿ ತೋಟ, ಹೊಲ, ಗದ್ದೆ, ಗುಂಡುತೋಪು ಒತ್ತುವರಿ ಅಂತ ಬೆಳಿಗ್ಗೆ ಎದ್ರೆ ಗಡಿ ಜಗಳ ಇದ್ದದ್ದೇ ಅಲ್ವೇನೆ?’

‘ಹ್ಞೂಂಕಣ್ರೀ, ಇಲ್ಲಂತೂ ಇನ್ನೂ ಅತಿರೇಕಕ್ಕೆ ಹೋಗಿದೆ. ಕೇಬಲ್ ವೈರ್, ಬಟ್ಟೆ ಒಣಹಾಕೋ ತಂತಿ ವಿಷಯದಲ್ಲಿ, ನಿಮ್ ಗಡಿ ಟ್ರೆಸ್‍ಪಾಸ್ ಮಾಡಿ ನಮ್ ಕಿಟಕಿಗೆ ಕಟ್ಟಿದೀರಿ ಅಂತ ಜುಜುಬಿ ಜಗಳಗಳೇ ಆಗೋಗಿವೆ... ಒಂದ್ನಿಮಿಷ ಇರಿ, ಇದೇನು ಜಗಳ ಅಂತ ನೋಡ್ತೀನಿ’ ಎಂದು ಕಿಟಕಿ ತೆಗೆದು ಕತ್ತು ಚಾಚಿ ನೋಡಿದಳು ಪದ್ದು.

‘ಅಯ್ಯೋ! ಟೆರೇಸ್‍ನಲ್ಲಿ ಲಕ್ಷ್ಮಣರೇಖೆಯ ಗಡಿ ದಾಟಿ ಬಂದು ಸಂಡಿಗೆ ಹಾಕಿದಾರೆ ಅನ್ನೋದಕ್ಕೆ ಜಗಳ, ಅದೂ ಗಂಡಸರದ್ದೇ ಜೋರು’.

‘ಓಹ್! ಹೌದಾ? ಗಡಿಯಲ್ಲಿ ಯೋಧರು ಎದೆ ಒಡ್ಡುತ್ತಿದ್ದಾರೆ ಗುಂಡಿಗೆ, ಇಲ್ಲಿ ಗಂಡಸರು ಟೆರೇಸ್ ಏರಿದ್ದಾರೆ ಇಡಲು ಸಂಡಿಗೆ’.

‘ರೀ, ಇನ್ನೂ ಒಂದು ತಿಂಗಳು ಯುದ್ಧ ಶುರುವಾಗದಿದ್ರೆ ಸಾಕು! ನಾನೂ ಸಂಡಿಗೆ ಹಾಕಬೇಕು’.

‘ಯುದ್ಧಕ್ಕೂ, ಸಂಡಿಗೆಗೂ ಏನೇ ಸಂಬಂಧ?’

‘ಯುದ್ಧ ಶುರುವಾಗಿ ಆ ಬಾಂಬ್ ಹೊಗೆ ಮೋಡದ ತರ ಕವಿದುಕೊಂಡ್ರೆ ಅರಳು ಸಂಡಿಗೆ ಹೇಗ್ರೀ ಒಣಗುತ್ತೆ?’

‘ಅದೂ ನಿಜಾನೆ ಬಿಡು. ಹೇಗಾದ್ರೂ ಆಗಲಿ, ಅರಳು ಸಂಡಿಗೆ ಮಾಡ್ಬೇಡ. ಮೇಲಿಂದ ಅದು ಬಾಂಬ್ ತರ ಕಂಡ್ರೆ ನಮ್ ಮನೆಮೇಲೆ ಕ್ಷಿಪಣಿ ಬಿದ್ದಾತು’ ಎಚ್ಚರಿಸಿದ ಪರ್ಮೇಶಿ.

ಪದ್ದಮ್ಮ ಕಣ್‌ಕಣ್ ಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.