ADVERTISEMENT

ಚುರುಮುರಿ| ಕೊರೊನಾ ಕಲ್ಯಾಣ

ಸಿ.ಎನ್.ರಾಜು
Published 21 ಏಪ್ರಿಲ್ 2021, 19:30 IST
Last Updated 21 ಏಪ್ರಿಲ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ನಮ್ಮ ಮಗಳ ಮದುವೆ ಫಿಕ್ಸ್ ಆಯ್ತು...’ ಎನ್ನುತ್ತಾ ಬಂದಳು ಪದ್ಮಾ.

‘ಸಂತೋಷದ ವಿಚಾರ...’ ಎಂದು ಅನು ಕೊರೊನಾ ಸ್ಪೆಷಲ್ ಕಾಫಿ ತಂದುಕೊಟ್ಟಳು.

‘ಸರ್ಕಾರಿ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳನ್ನು ಮಾಡ್ತೀವಿ. ಮಾಸ್ಕ್, ಸ್ಯಾನಿಟೈಸರ್, ಪರಸ್ಪರ ಅಂತರ ಪಾಲಿಸ್ತೀವಿ...’

ADVERTISEMENT

‘ಮಂತ್ರ ಹೇಳೋರು, ವಾಲಗ ಊದೋರೂ ಮಾಸ್ಕ್ ಹಾಕಿಕೊಳ್ತಾರಾ?’ ಕೇಳಿದ ಗಿರಿ.

‘ಹೌದು ಹಾಕಿಕೊಳ್ಳಲೇಬೇಕು’.

‘ಇನ್ವಿಟೇಷನ್ ಹಂಚಿದ್ದು ಮುಗೀತಾ?’

‘ಕೊರೊನಾ ಕೃಪೆಯಿಂದ ಇನ್ವಿಟೇಷನ್ ಖರ್ಚು ಉಳಿದಿದೆ. ಮದುವೆ ಕರೆಯೋಲೆಗಿಂತ ಸರ್ಕಾರದ ಸುತ್ತೋಲೆ ಮುಖ್ಯ. ಸರ್ಕಾರ ಹೇಳಿದಷ್ಟು ಜನರನ್ನು ಮಾತ್ರ ಮದ್ವೆಗೆ ಇನ್‌ವೈಟ್ ಮಾಡ್ತೀವಿ’ ಎಂದಳು ಪದ್ಮಾ.

‘ಹೀಗೆ ಮಾಡೋದ್ರಿಂದ ಕರೀದೆ ಇದ್ದವ್ರಿಗೆ ಬೇಜಾರಾಗೋದಿಲ್ವೇ?’ ಅನು ಕೇಳಿದಳು.

‘ಹೌದೂರೀ, ಮಗಳ ಮದ್ವೆಯನ್ನು ಡಿಸ್ಟಿಂಕ್ಷನ್‍ನಲ್ಲಿ ಮಾಡಬೇಕೂಂತ ನಮಗೂ ಆಸೆ ಇತ್ತು, ಏನು ಮಾಡೋದು, ಕೊರೊನಾ ಕಾಟದಲ್ಲಿ ಮದ್ವೆ ಜಸ್ಟ್ ಪಾಸ್ ಆದ್ರೆ ಸಾಕಾಗಿದೆ...’ ಪದ್ಮಾಳಿಗೂ ಬೇಸರ.

‘ನಿಮ್ಮದು ದೊಡ್ಡ ಬಳಗ. ಕೆಲವೇ ಜನರನ್ನು ಕರೆದ್ರೆ, ಉಳಿದವರನ್ನ ಹೇಗೆ ನಿಭಾಯಿಸ್ತೀರಿ?’

‘ಪ್ಲಾನ್ ಮಾಡಿದ್ದೀವಿ. ಅಡುಗೆಯವರು, ವಾಲಗದವರು, ಪುರೋಹಿತರು, ಹೂವಿನವರು, ಸ್ಟೇಜ್ ಅಲಂಕಾರ ಮಾಡೋರು, ಫೋಟೊ, ವಿಡಿಯೊದವರು, ಜೊತೆಗೆ ವಧು-ವರರ ಹೆತ್ತವರು, ಒಡಹುಟ್ಟಿದವರು, ವಧುವಿಗೆ ಟಚಪ್ ಮಾಡುವ ಆಕೆಯ ಕ್ಲಾಸ್‍ಮೇಟ್‍ಗಳು, ವರನಿಗೆ ಬೆಂಗಾವಲಾಗುವ ಅವನ ಕ್ಲಾಸ್ ದೋಸ್ತಿಗಳು ಇವರಿಗೆಲ್ಲಾ ಮೊದಲ ಪ್ರಿಫರೆನ್ಸ್‌. ಇನ್ನೂ ಉಳಿದರೆ ಮಾತ್ರ ಬೇರೆಯವರನ್ನು ಕರಿತೀವಿ’.

ಛೇ, ಎಂಥಾ ಗತಿ ಬಂತೂರೀ...’ ಅನು ಲೊಚಗುಟ್ಟಿದಳು.

‘ಹತ್ತಿರದ ಬಳಗದವರೇ 50 ಜನ ಆಗಿಬಿಟ್ರೆ ನಿಮ್ಮನ್ನ ಕರೆಯೋಕ್ಕೆ ಆಗಲ್ಲಾರೀ... ಮದ್ವೇನ ಫೇಸ್‌ಬುಕ್ ಲೈವ್ ಮಾಡ್ತೀವಿ, ನೋಡಿ ಲೈಕು, ಕಮೆಂಟ್ ಮಾಡಿ...’ ಎಂದು ಹೊರಟಳು ಪದ್ಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.