ADVERTISEMENT

ಚುರುಮುರಿ: ತಾಕತ್ತು ಇದ್ದರೇ...!

ಚಂದ್ರಕಾಂತ ವಡ್ಡು
Published 14 ಸೆಪ್ಟೆಂಬರ್ 2022, 19:30 IST
Last Updated 14 ಸೆಪ್ಟೆಂಬರ್ 2022, 19:30 IST
   

‘ನನಗೆ ನನ್ನ ಮಗನದೇ ದೊಡ್ಡ ಚಿಂತೆಯಾಗಿದೆ…’ ಬದ್ರಿ ಶುರು ಹಚ್ಚಿಕೊಂಡ.

‘ಎಲ್ಲರ ಮಕ್ಕಳೂ ಅಪ್ಪಂದಿರನ್ನು ಇದ್ದಾಗ ಚಿಂತೆಗೆ, ಮುಗಿದಾಗ ಚಿತೆಗೆ ಈಡು ಮಾಡುವವರೇ, ನಿನ್ನದೇನು ವಿಶೇಷ?’ ತಿಂಗಳೇಶ ತಿಳಿಗೊಳಿಸಲು ಯತ್ನಿಸಿದ.

‘ಎದ್ದು ಹಾಸಿಗೆ ಮಡಚಲ್ಲ, ಉಂಡ ತಟ್ಟೆ ಎತ್ತಲ್ಲ, ಅಂಗಡಿಯಿಂದ ಸಾಮಾನು ತರಲ್ಲ, ಏನು ಕೆಲಸ ಹೇಳಿದರೂ ಖರ್ಚಿಗೆ ತಾ ಅಂತಾನೆ…’

ADVERTISEMENT

‘ಒಂದಿಷ್ಟು ಕೊಟ್ಟರಾಯಿತು. ಮಳೆ ಬಂದರೆ, ಮಗ ಉಂಡರೆ ಕೇಡಿಲ್ಲ ಅಂತಾರೆ’.

‘ಈ ಗಾದೆ ವೇದದಷ್ಟೇ ಸುಳ್ಳು ಎಂದು ಅನುಭವಿಸಿದವರಿಗೆಲ್ಲಾ ಗೊತ್ತು. ಬೆಳೆಯುವ ಹುಡುಗ ಅಂತ ಮೊದಲಿಂದಲೂ ಒಂದಿಷ್ಟು ಕಾಸು ಕೊಡುತ್ತಲೇ ಇದ್ದೆ. ಇತ್ತೀಚೆಗೆ ದುಪ್ಪಟ್ಟು ಕೇಳಲು ಶುರು ಮಾಡಿದ್ದಾನೆ’.

‘ಹಾಗಾದರೆ ಈಗ ಹುಡುಗ ಬೆಳೆದಾಗಿದೆ. ಒಂದಿಷ್ಟು ಹೆಚ್ಚು ಮಾಡು’.

‘ಅದೂ ಮಾಡಿದೆ. ಹಣ ಸಿಕ್ಕ ಕೂಡಲೇ ಓಟ ಕೀಳುತ್ತಾನೆ. ‘ತಾಕತ್ತಿದ್ದರೆ ಹಿಡಿ, ಧಂ ಇದ್ರೆ ಹೊಡಿ ನೋಡೋಣ’ ಅಂತ ಸವಾಲು ಬೇರೆ!’

‘ಅದಿರಲಿ, ಅವನು ಓದಿನಲ್ಲಿ ಹೇಗೆ?’

‘ಅವನೇ ದೊಡ್ಡಬಳ್ಳಾಪುರ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಂಡ, ಹತ್ತನೇ ತರಗತಿ ಮೂರು ಬಾರಿ ಫೇಲಾದ. ಹೆಚ್ಚಿಗೆ ಕೇಳಿದರೆ, ‘ನೀನು ಸಣ್ಣವನಿದ್ದಾಗ ಮಾಡಿದ್ದನ್ನೆಲ್ಲಾ ಅಜ್ಜಿ ಹೇಳಿದ್ದಾಳೆ. ನಿನ್ನ ಹಿಂದಿನ ಜಾತಕ ಬಿಚ್ಚಿಡಲೇ…?’ ಅಂತ ತಿರುಗೇಟು’.

‘ಅವನ ಮೇಷ್ಟ್ರ ಕಡೆಯಿಂದ ಬುದ್ಧಿವಾದ ಹೇಳಿಸಿ ನೋಡು?’

‘ಅದೂ ಮಾಡಿಯಾಯ್ತು. ‘ನೀವೆಲ್ಲಾ ನಮ್ಮಪ್ಪನ ಬಿ ಟೀಮ್... ಹೇಳಿದ್ದೇ ಹೇಳ್ತೀರಿ’ ಅಂತ ಅವರ ಬಾಯಿ ಮುಚ್ಚಿಸಿದ. ನೀನಾದರೂ ಒಂದು ಮಾತು ಹೇಳು ದೋಸ್ತಾ’ ಎಂದು ಗೋಗರೆದ ಬದ್ರಿ.

ತಾನೇನೋ ಹೇಳಬಹುದು, ‘ಅದನ್ನು ಕೇಳೋಕೆ ನೀನ್ಯಾರು…?’ ಅಂತ ತಿರುಗಿಬಿದ್ರೆ ಕಷ್ಟ ಎಂದು ಭಯಬಿದ್ದ ತಿಂಗಳೇಶ, ಅಪ್ಪನಲ್ಲಿ ಹೊಸ ಭರವಸೆ ಹುಟ್ಟಿಸಿದ: ‘ನೀನೇನೂ ಚಿಂತಿಸಬೇಡ. ನಿನ್ನ ಮಗ ಯಶಸ್ವಿ ರಾಜಕಾರಣಿ ಆಗೋದು ಗ್ಯಾರಂಟಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.