ADVERTISEMENT

ಕಲಹ ಸಮೀಕ್ಷೆ

ಮಣ್ಣೆ ರಾಜು
Published 5 ಜುಲೈ 2022, 19:30 IST
Last Updated 5 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಚುನಾವಣೆಗೆ ಮುನ್ನ ಆಂತರಿಕ ಸಮೀಕ್ಷೆ ನಡೆಸಿ ಹೈಯೆಸ್ಟ್ ಮಾರ್ಕ್ಸ್‌ ಪಡೆಯುವ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆಯಾ?’ ಸುದ್ದಿ ಓದಿ ಸುಮಿ ಕೇಳಿದಳು.

‘ಸಮೀಕ್ಷೆಗಳು ಉಲ್ಟಾ ಆಗುತ್ತವೆ. ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತೆ ಅಂತ ಕುಮಾರಣ್ಣ ತಮ್ಮ ಸಮೀಕ್ಷೆ ಪ್ರಕಟಿಸಿದ್ದಾರೆ’ ಅಂದ ಶಂಕ್ರಿ.

‘ಅವರ ಪಕ್ಷದ ಸಮೀಕ್ಷೆಯನ್ನು ಅವರೇ ಮಾಡಿಕೊಂಡು ಗ್ರೇಸ್ ಮಾರ್ಕ್ಸ್‌ ಹಾಕಿಕೊಂಡು ಅಂಕಪಟ್ಟಿ ಸಿದ್ಧ ಮಾಡಿಕೊಳ್ಳೋ ಬದಲು ಕಾಂಗ್ರೆಸ್ ಸಮೀಕ್ಷೆಯನ್ನು ಬಿಜೆಪಿ, ಬಿಜೆಪಿ ಸಮೀಕ್ಷೆಯನ್ನು ಜೆಡಿಎಸ್ ಮಾಡಿದರೆ ನಿಖರ ಫಲಿತಾಂಶ ದೊರೆಯಬಹುದು ಕಣ್ರೀ’.

ADVERTISEMENT

‘ಆಂತರಿಕ ಸಮೀಕ್ಷೆ ಮಾಡಿದರೆ ಸಾಲದು, ಪಕ್ಷಗಳ ಆಂತರಿಕ ಕಲಹಗಳ ಸಮೀಕ್ಷೆಯೂ ಆಗಬೇಕಾಗುತ್ತದೆ. ಮಂತ್ರಿ, ಮುಖ್ಯಮಂತ್ರಿ ಸ್ಥಾನಕ್ಕೆ ಕಾಲ್ತೊಡಕಾಗಿದ್ದಾರೆಂದು ಒಬ್ಬರ
ನ್ನೊಬ್ಬರು ಕಾಲೆಳೆಯುವುದು, ಯಾರ್‍ಯಾರು ಪಕ್ಷದಿಂದ ಕಾಲ್ಕೀಳುವರು, ಪರ ಪಕ್ಷದಿಂದ ಬಂದು ಪಕ್ಷ ಸೇರ್ಪಡೆಯಾಗುವವರ ಕಾಲ್ಗುಣವೇನು... ಇವೆಲ್ಲದರ ಲೆಕ್ಕಾಚಾರವೂ ಚುನಾವಣೆ ರಿಸಲ್ಟ್‌ಗೆ ಕೌಂಟಾಗಬಹುದು’.

‘ಸದ್ಯ, ಇಂಥಾ ಸಮೀಕ್ಷೆ ಆಧಾರದ ಮೇಲೆ ಸರ್ಕಾರ ರಚನೆ ಮಾಡಲು ಅವಕಾಶವಿಲ್ಲ. ಚುನಾವಣೆ ನಡೆದು ಪಕ್ಷಗಳ, ನಾಯಕರ ಭವಿಷ್ಯ ಬರೆಯುವ ಭಾಗ್ಯ ಮತದಾರರಿಗೆ ಉಳಿದಿದೆ’.

‘ಅದೇನು ಭಾಗ್ಯವೋ, ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಸಕ್ತಿ ತೋರುತ್ತಿಲ್ಲ. 50-60 ಪರ್ಸೆಂಟ್ ಮತದಾನವಾದರೆ ಹೆಚ್ಚು ಎನ್ನುವಂತಾಗಿದೆ. ಇದರಿಂದ ಚುನಾವಣೆ ಆಶಯ ಸಫಲವಾಗದು’.

‘ಅಭ್ಯರ್ಥಿಗಳು ಮನೆಮನೆಗೆ ಹೋಗಿ ಕರಪತ್ರ ಕೊಟ್ಟು, ಕೈ ಮುಗಿದರೂ ಮತ ಹಾಕಲು ಬರದಿದ್ದರೆ ಬಲವಂತ ಮಾಡಲಾಗುತ್ತಾ?’

‘ಹೀಗೇ ಆದರೆ, ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಎನ್ನುವಂತೆ, ಮತದಾರರ ಮನೆ ಬಾಗಿಲಿಗೆ ಹೋಗಿ ಅವರ ಮತ ಸಂಗ್ರಹಿಸಿ ತಂದು ಚುನಾವಣೆ ನಡೆಸುವ ಪರಿಸ್ಥಿತಿ ಬಂದರೂ ಬರಬಹುದು...’ ಶಂಕ್ರಿ ಬೇಸರ ವ್ಯಕ್ತಪಡಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.