ADVERTISEMENT

ಚುರುಮುರಿ: ಮಾತು ವಾಪ್ಸಿ!

ಆನಂದ ಉಳಯ
Published 5 ಜನವರಿ 2022, 19:31 IST
Last Updated 5 ಜನವರಿ 2022, 19:31 IST
   

‘ಘರ್‌ ವಾಪ್ಸಿ ತರಹ ಮಾತು ವಾಪ್ಸಿ ಕಾರ್ಯಕ್ರಮ ಏನಾದರೂ ಇದೆಯೇ?’ ಎಂದು ಚಂದ್ರಿ
ಕೇಳಿದ.

‘ಘರ್‌ ವಾಪ್ಸಿ ಚಾಲ್ತಿಯಲ್ಲಿದೆ. ಮಾತು ವಾಪ್ಸಿ? ಅದೇನಪಾ, ಏನೇನೋ ಹೇಳೋದು. ಅದು ಕಾಂಟ್ರವರ್ಸಿ ಆಗುತ್ತೆ. ಆಗ...
ವಿಷಾದ ವ್ಯಕ್ತಪಡಿಸೋದು. ಅದೂ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಎಂಬ ಕಂಡೀಷನ್ ಮೇಲೆ. ಅದೇ ತಾನೆ?’

‘ಅದಲ್ಲಪಾ...’

ADVERTISEMENT

‘ಮತ್ತೆ ಕ್ಷಮೆ ಕೇಳೋದು. ಒಂದು ಮಾಮೂಲಿ ಕ್ಷಮೆ, ಇನ್ನೊಂದು ಬೇಷರತ್ ಕ್ಷಮೆ. ಅದು ವಾಪ್ಸಿ ಹೇಗಾಗುತ್ತೆ?’

‘ವಿಷಾದಾನೂ ಅಲ್ಲ, ಕ್ಷಮೆಗಳೂ ಅಲ್ಲ. ಹೇಳಿದ್ದ ಮಾತನ್ನು ವಾಪಸ್ ಪಡೆಯೋದು. ಅದೇ ಮಾತು ವಾಪ್ಸಿ’.

‘ಹೇಗೆ ಸಾಧ್ಯ? ಮಾತು ವಾಪಸ್ ಪಡೆಯೋದು ಅಂದರೆ?’

‘ಯಾಕೆ ಸಾಧ್ಯವಿಲ್ಲ? ಮೊನ್ನೆ ತೇಜಸ್ವಿ ಅವರು ಏನೋ ಹೇಳಿ, ಅದರ ಬಗ್ಗೆ ವಿವಾದ ಹುಟ್ಟಿ(ಸಿ)ದಾಗ, ಅವರು ‘ನಾನು ಆ ಮಾತನ್ನು ವಾಪಸ್ ಪಡೀತೀನಿ’ ಎಂದರು. ಅದೇ ಮಾತು ವಾಪ್ಸಿ. ಪ್ರಶಸ್ತಿಗಳನ್ನು ವಾಪಸ್ ಮಾಡೊಲ್ಲವೇ, ಹಾಗೇ ಇದೂ ಅಂತಿಟ್ಕೊ. ಆದರೆ ಮಾತನ್ನು ಹೇಗೆ ಹಿಂತಿರುಗಿಸೋದು?’

‘ಆ ಮಾತನ್ನು ನಾನು ವಾಪಸ್ ಪಡೆದಿದ್ದೇನೆ ಎಂದು ಒಂದು ಹೇಳಿಕೆ ನೀಡುವುದು’.

‘ಆಗ ಆಡಿದ್ದ ಮಾತು ಕ್ಯಾನ್ಸಲ್ ಆಗುತ್ತೇನು?’

‘ಆಯಿತು ಅಂತ ಭಾವಿಸಬೇಕು. ಬೇರೆ ಇನ್ನೇನು ದಾರಿ ಇದೆ?’

‘ಮಾತನ್ನು ಸುಮ್ಮನೆ ವಾಪಸ್ ಪಡೆಯೋದೋ ಅಥವಾ ಬೇಷರತ್ ವಾಪಸ್ ಪಡೆಯೋದೋ? ಬೇಷರತ್ ಕ್ಷಮೆ ಕೇಳೋ ಹಾಗೆ?’

‘ಇಟ್ ಡಿಪೆಂಡ್ಸ್’.

‘ಹಾಗಿದ್ದರೆ ಈಗೀಗ ಶಾಸಕರ, ಮಂತ್ರಿಗಳ ಮಟ್ಟದಲ್ಲಿ ಕೈಕೈ ಮಿಲಾಯಿಸುವ ಕಾರ್ಯಕ್ರಮ ಶುರುವಾಗಿರುವುದರಿಂದ, ಒಂದು ಏಟು ಬಾರಿಸಿ, ಆಮೇಲೆ ನಾನು ಆ ಏಟನ್ನು ವಾಪಸ್ ಪಡೆದಿದ್ದೇನೆ ಎಂದರೆ ಹೇಗೆ?’

‘ಅದು ಶುರುವಾಗಲಿ ನೋಡೋಣ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.