ADVERTISEMENT

ಚುರುಮುರಿ| ನಾಲಿಗೆ ಚಿಕಿತ್ಸೆ

ಸಿ.ಎನ್.ರಾಜು
Published 29 ಜನವರಿ 2021, 19:30 IST
Last Updated 29 ಜನವರಿ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸಭೆ, ಸಮಾರಂಭಗಳಲ್ಲಿ ಜನನಾಯಕರು ತಮ್ಮ ಆಚಾರವಿಲ್ಲದ ನಾಲಿಗೆಯನ್ನು ಹರಿಯಬಿಟ್ಟು ಗ್ರಹಚಾರ ಕೆಡಿಸಿಕೊಳ್ಳುವುದು ಹೆಚ್ಚಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಜನ ಈ ನಾಯಕರ ಜನ್ಮ ಜಾಲಾಡುತ್ತಿದ್ದರು. ಹೀಗಾದರೆ, ಪಕ್ಷದ ಇಮೇಜು ಡ್ಯಾಮೇಜ್ ಆಗುತ್ತದೆ ಎಂದು ಹೈಕಮಾಂಡ್ ಕಳವಳಗೊಂಡಿತು.

ನಾಲಿಗೆಗೆ ರುಚಿ ತಿಳಿದರೆ ಸಾಲದು, ಅಭಿರುಚಿಯೂ ಇರಬೇಕು, ನಾಯಕರ ಹರಕು ನಾಲಿಗೆಗಳನ್ನು ರಿಪೇರಿ ಮಾಡಲು ಕ್ರಮ ಕೈಗೊಳ್ಳಿ ಎಂದು ಪಕ್ಷದ ಶಿಸ್ತು ಸಮಿತಿಗೆ ಹೈಕಮಾಂಡ್ ಸೂಚಿಸಿತು.

ನಾಯಕರ ನಾಲಿಗೆ ಚಿಕಿತ್ಸಾ ಶಿಬಿರ ಏರ್ಪಡಿಸಿ, ಅರ್ಹ ನಾಯಕರು ಕಡ್ಡಾಯವಾಗಿ ಭಾಗವಹಿಸಲು ಶಿಸ್ತು ಸಮಿತಿ ಆದೇಶ ಮಾಡಿತು.

ADVERTISEMENT

‘ಶತ್ರುಗಳನ್ನು ಮಟ್ಟ ಹಾಕಲು ನಮ್ಮಲ್ಲಿ ಬಿಲ್ಲು-ಬಾಣ, ಕತ್ತಿ-ಗುರಾಣಿ ಇಲ್ಲ. ಇರುವ ಆಯುಧವೆಂದರೆ ಅದು ನಾಲಿಗೆ ಮಾತ್ರ, ಅದಕ್ಕೂ ಕಡಿವಾಣ ಹಾಕಿದರೆ ನಾವು ಶತ್ರುಗಳ ದಮನವನ್ನು ಹೇಗೆ ಮಾಡುವುದು?’ ಎಂದು ಕೆಲ ನಾಯಕರು ತಪಾಸಣೆಗೆ ಹಿಂಜರಿದರೂ ಬಿಡದೆ ಅವರನ್ನು ನಾಲಿಗೆ ತಪಾಸಣೆಗೆ
ಒಳಪಡಿಸಲಾಯಿತು.

‘ಡಾಕ್ಟ್ರೇ, ಬಿ.ಪಿ. ಏರಿದಾಗ ನನ್ನ ನಾಲಿಗೆ ಉದ್ದವಾಗುತ್ತದೆ. ಏನೇನು ಬೈಯುತ್ತೇನೋ ನನಗೇ ಗೊತ್ತಾಗುವುದಿಲ್ಲ. ಬಿ.ಪಿ ಹಾಗೂ ನಾಲಿಗೆ ಎರಡಕ್ಕೂ ಕಡಿವಾಣ ಹಾಕಿ’ ನಾಯಕರೊಬ್ಬರು ಕೇಳಿಕೊಂಡರು.

‘ನನಗೂ ಹಾಗೇ ಡಾಕ್ಟ್ರೇ, ಮೈಕು, ಟಿ.ವಿ ಕ್ಯಾಮೆರಾ ಕಂಡಕೂಡಲೇ ಮೈಮರೆಯುತ್ತೇನೆ, ನಾಲಿಗೆ ನಿಯಂತ್ರಣ ತಪ್ಪುತ್ತದೆ. ನನಗೆ ಅರಿವಿಲ್ಲದೇ ಬೈಗುಳಗಳು ನುಗ್ಗಿ ಬರುತ್ತವೆ’ ಎಂದರು ಇನ್ನೊಬ್ಬರು.

ಶಿಬಿರದಲ್ಲಿ ನಾಲಿಗೆ ತಜ್ಞರು ನಾಯಕರ ನಾಲಿಗೆಗಳ ಉದ್ದ, ಅಗಲ, ಗಾತ್ರ, ಘನತೆಗಳನ್ನು ಎಳೆದು ಅಳೆದರು. ಮಿತಿಮೀರಿದ್ದ ನಾಲಿಗೆಗಳಿಗೆ ಚಿಕಿತ್ಸೆ ಮಾಡಿ ತಹಬಂದಿಗೆ ತರುವ ಪ್ರಯತ್ನ ಮಾಡಿದರು. ಶಿಬಿರದ ನಂತರ, ಶಿಬಿರಾರ್ಥಿಗಳು ಅಧ್ಯಯನ ಮಾಡಿ, ಅಳವಡಿಸಿಕೊಳ್ಳಲೆಂದು ‘ಹಿತಕರ ಬೈಗುಳ’ ಪುಸ್ತಕವನ್ನು ಶಿಸ್ತು ಸಮಿತಿ ವಿತರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.