ADVERTISEMENT

ಚುರುಮುರಿ| ಪುಣ್ಯಕೋಟಿ-2.0

ಲಿಂಗರಾಜು ಡಿ.ಎಸ್
Published 5 ಸೆಪ್ಟೆಂಬರ್ 2022, 19:30 IST
Last Updated 5 ಸೆಪ್ಟೆಂಬರ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸತ್ಯಕ್ಕಾಗಿ ಬದುಕಿದ್ದ ಪುಣ್ಯಕೋಟಿಗಳ ದಂಡನ್ನು ಆಧುನಿಕ ಕಾಲದಲ್ಲಿ ನೀತಿ, ನ್ಯಾಯ, ಧರ್ಮಗಳನ್ನು ಮಾರಿಕೊಂಡ ಹುಲಿಗಳೇ ಆಳತೊಡಗಿದ್ದವು.

ಹುಲಿಗಳು ಹೇಳಿದ್ದೇ ಸತ್ಯ, ಇದೇ ಸಮರ್ಥ ಆಡಳಿತ ಎಂಬ ನಂಬಿಕೆಯನ್ನು ಗೋವುಗಳ ಮನಸ್ಸಲ್ಲಿ ಹುಟ್ಟುಹಾಕಲಾಗಿತ್ತು. ಖೂಳ ವ್ಯಾಘ್ರಗಳು ರೇವಡಿ ದನಸ್ನೇಹಿ ಕ್ರಮಗಳು, ಉಚಿತ ರೇಷನ್, ಸಸ್ತಾ ಕ್ಯಾಂಟೀನು, ಆಧುನಿಕ ಪೆದ್ದಾರಿಗಳ ಹುಸಿ ಜಾಹೀರಾತುಗಳನ್ನು ತೋರಿಸುತ್ತಾ ಅಕ್ರಮ ಪರ್ಸೆಂಟೇಜು ಗಳಿಸಿ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದವು. ಹುಲಿಗಳು ತಿಂದು ಬಿಟ್ಟ ಎಂಜಲಿಗಾಗಿ ನರಿ-ತೋಳಗಳು ಕಾಯ್ದು ಕುಳಿತಿದ್ದವು.

ನಗರದ ಐಟಿ ಗೋವುಗಳು, ತಾವು ತೆರಿಗೆಯ ನೊಗ ಹೊತ್ತು ದುಡಿದರೂ ಹುಲಿಗಳ ಸರ್ಕಾರ ತಮಗೆ ಸರಿಯಾದ ಸೌಕರ್ಯ ಕಲ್ಪಿಸುತ್ತಿಲ್ಲ ಎಂದು ಸಿಟ್ಟಿಗೆದ್ದು, ತಾವು ಬೇರೆ ಕಡೆ ದುಡಿಯಲು ಹೋಗುವುದಾಗಿ ಬೆದರಿಕೆ ಹಾಕಿದವು.

ADVERTISEMENT

ಹುಲಿಗಳು ‘ನುಸುಳಿ ಹೋಗುವೆ, ಹುಸಿಯ ನಾಡುವೆ!’ ಎಂದು ಗೊಣಗಿಕೊಳ್ಳುತ್ತಾ ಮಳೆ ನಿಂತ ಕೂಡಲೇ ರಸ್ತೆ, ಟ್ರಾಫಿಕ್ ಅವ್ಯವಸ್ಥೆ ಸರಿ ಪಡಿಸುವುದಾಗಿ ಹಳೇ ರೆಕಾರ್ಡನ್ನು ಮತ್ತೆ ಹಾಕಿದವು! ರಸ್ತೆಗುಂಡಿಗಳ ಹೋಲ್‍ಗೇಟುಗಳು, ರಾಜಕಾಲುವೆ ಒತ್ತುವರಿ, ಪಾಲಿಕೆ, ಅಭಿವೃದ್ಧಿ ಪ್ರಾಧಿಕಾರಗಳ ನಾಟಕ, ಸ್ಟೀಲ್ ಬ್ರಿಡ್ಜ್ ಕುಲು ಕಾಟದ ಮೋಸ ನಿಲ್ಲದೇ ನಿರಂತರವಾಗಿ ನಡೆಯುತ್ತಲೇ ಇತ್ತು.

ಗೋಮುಖ ಧರಿಸಿದ ಹುಲಿಗಳು ದನ ಸಾಮಾನ್ಯರಾದ ತಮ್ಮನ್ನು ವೋಟಿಗಾಗಿ ಮೋಸಗೊಳಿಸುತ್ತಿವೆ ಎಂಬುದನ್ನು ಅರಿತ ಗೋವುಗಳು ನಿಸ್ಸಹಾಯಕತೆಯಿಂದ ‘ಕಣ್ಣ ನೀರನು ಸುರಿಸಿ ನೊಂದು, ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು. ಚಂಡ ವ್ಯಾಘ್ರನೆ ನೀನಿದೆಲ್ಲವ ಉಂಡು ಸಂತಸದಿಂದಿರು’ ಎಂದು ದುಃಖದಿಂದ ಶಾಪ ಹಾಕುತ್ತಾ ರಸ್ತೆಗುಂಡಿಗೆ ಹಾರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡವು!

ಕಿಂಚಿತ್ತೂ ನೋಯದ ಆಳುವ ಹುಲಿಗಳು ಮತ್ತು ವಿರೋಧಪಕ್ಷದ ಹುಲಿಗಳು ಹಸಿದ ವೇಳೆಗೆ ಸಿಕ್ಕಿದ ಈ ಅವಘಡ ತಮಗೆಷ್ಟು ಮತ ತಂದುಕೊಡಬಹುದು ಎಂಬ ಲೆಕ್ಕಾಚಾರದಲ್ಲಿ ಕಳೆದುಹೋದವು! ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.