ADVERTISEMENT

ಚುರುಮುರಿ: ಕೆಸರಾಟವೇ ಪರಿಹಾರ

ಸುಮಂಗಲಾ
Published 11 ಸೆಪ್ಟೆಂಬರ್ 2022, 19:30 IST
Last Updated 11 ಸೆಪ್ಟೆಂಬರ್ 2022, 19:30 IST
   

ಬೆಕ್ಕಣ್ಣ ‘ಮಸಾಲೆ ದೋಸೆ ಮಾಡಿಕೊಡು’ ಎಂದು ದುಂಬಾಲು ಬಿದ್ದಿತ್ತು. ‘ಇಲಿ, ಹೆಗ್ಗಣ ಹಿಡಿದು ತಿನ್ನೂದು ಬಿಟ್ಟು ದೋಸೆ ತಿಂತೀಯೇನಲೇ?’ ಎಂದೆ ಅಚ್ಚರಿಯಿಂದ.

‘ನನಗಲ್ಲ, ತೇಜಸ್ವಿಯಣ್ಣಂಗೆ ಕಳಿಸತೀನಿ. ಕೈಪಕ್ಷದವರು ಅವಂಗ ದೋಸೆ ಕಳಿಸಿದ್ರಂತ, ನಾನೂ ಕಳಸತೀನಿ’ ಅಂದಿತು.

‘ಬೆಂಗಳೂರಾಗೆ ಮಂದಿ ಮಳೆನೀರಾಗೆ ತೇಲಿ ಹೋಗತಿದ್ದರೆ, ತೇಜಸ್ವಿಯಣ್ಣ ದೋಸೆ ತಿಂತಾ ಕುಂತಿದ್ದನಂತ ಅಣಕಿಸಾಕೆ ಕಳಿಸ್ಯಾರೆ’.

ADVERTISEMENT

‘ಹಂಗಾದ್ರ ಕೈಪಕ್ಷದವರು ಯಾರೂ ಊಟಾನೆ ಮಾಡಿಲ್ಲೇನ್’ ಎಂದು ಉಲ್ಟಾ ಹೊಡೆದ ಬೆಕ್ಕಣ್ಣ, ‘ಈ ವರ್ಸ ನಮ್ಮಲ್ಲಿ ಎದಕ್ಕ ಇಷ್ಟಕೊಂದು ಮಳಿ ಆಗೈತಿ ಹೇಳು’ ಎಂದು ಕೇಳಿತು.

‘ಗ್ಲೋಬಲ್ ವಾರ್ಮಿಂಗು, ಅಭಿವೃದ್ಧಿಯ ದುಷ್ಪರಿಣಾಮ, ವಿರೋಧಪಕ್ಷಗಳ ಕುತಂತ್ರ’ ತಡವರಿಸುತ್ತ ಹೇಳಿದೆ.

ಪಕಪಕನೆ ನಕ್ಕ ಬೆಕ್ಕಣ್ಣ, ‘ಇಷ್ಟ್ ಮಳಿ ಆಗಿ, ಕೆರೆಕಾಲುವೆ ತುಂಬಿ ಹರಿದಿದ್ದು ಕಮಲಕ್ಕನ ಕಾಲ್ಗುಣದಿಂದ ಅಂತ ಸಿಟಿ ರವಿಯಣ್ಣ ಹೇಳ್ಯಾನ. ನಮ್ಮ ರಾಜ್ಯದಾಗೆ ಬಿಜೆಪಿ ಅಧಿಕಾರದಾಗೆ ಇದ್ದಾಗೆಲ್ಲ ಅವರ ಕಾಲ್ಗುಣದಿಂದ ಕೆರೆಕಾಲುವೆ ತುಂಬಿ ಹರಿದಾವು. ಕೈಪಕ್ಷದ ಸರ್ಕಾರವಿದ್ದಾಗ ಬರಗಾಲವೇ ಗತಿ’ ಎಂದು ಅಣಕಿಸಿತು.

‘ಯಾವ ಪಕ್ಷದ ಸರ್ಕಾರ ಅಂತ ನೋಡಿ ಮೋಡಗಳು ಮಳೆ ಸುರಿಸತಾವೇನು? ಈ ಮಳೆ ಮಾತ್ರವಲ್ಲ... ಹಗರಣಗಳ ಮಳೆನೂ ಸುರದೈತಿ. ಪಿಎಸ್ಐ ಹಗರಣದಿಂದ ಹಿಡಿದು ಹತ್ತಾರು ನೇಮಕಾತಿ ಹಗರಣ, ನಲ್ವತ್ತು ಪರ್ಸೆಂಟ್ ಹಗರಣದ ಬಿರುಮಳೆನೂ ಸುರಿದೈತಿ’.

‘ಸಾವಿಲ್ಲದ ಮನೆ ಹೆಂಗೆ ಇಲ್ಲವೋ ಹಂಗೇ ಹಗರಣದ ಮಳೆ ಸುರಿಸದೇ ಇರೋ ಪಕ್ಷವೇ ಇಲ್ಲ’ ಎಂದು ವೇದಾಂತ ಕುಟ್ಟಿದ ಬೆಕ್ಕಣ್ಣ ‘ದೊಡ್ಡ ಫೆವಿಕಾಲ್ ಡಬ್ಬ ಕೊಡು. ಕೈಪಕ್ಷದವರು ಅದೇನೋ ಭಾರತ ಜೋಡಿಸ್ತಾರಂತ, ಅದಕ್ಕ ಕೊಟ್ಟುಬರ್ತೀನಿ’ ಅಂದಿತು.

‘ಮಂದಿಗೆ ಭಾರತ ಜೋಡೊ, ಜನಸ್ಪಂದನ ಇವ್ಯಾವೂ ಬ್ಯಾಡಲೇ. ರಾಜಕಾಲುವೆ ಸರಿಮಾಡಿ ಸಲಿ, ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲಿ’.

‘ಪರಿಹಾರದ ಕೆಲಸ ಮಾಡ್ತಾ ಕೂತ್ರೆ ಕೆಸರು ಎರಚಾಟ ಆಡೋರು ಯಾರು ಮತ್ತ’ ಬೆಕ್ಕಣ್ಣ ಖೊಳ್ಳನೆ ನಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.