ADVERTISEMENT

ಮಿದುಳನ್ನೇ ತಿದ್ದುವವರು!

ಸುಮಂಗಲಾ
Published 13 ಜನವರಿ 2019, 20:15 IST
Last Updated 13 ಜನವರಿ 2019, 20:15 IST
   

‘ದೇವಲೋಕದ ಗೂಗಲ್’ ಎಂಬ ಬಿರುದಾಂಕಿತನಾದ ನಾರದ ಹಾಂಕಾಂಗ್‌ನಿಂದ ಹೊತ್ತು ತಂದ ಸುದ್ದಿಯೊಂದು ಬ್ರಹ್ಮನ ನಿದ್ದೆಗೆಡಿಸಿತ್ತು. ‘ಹೆ’ ಎಂಬ ಯುವ ವಿಜ್ಞಾನಿಯೊಬ್ಬ ಎಳೇ ಗರ್ಭಾಂಕುರದ ತಳಿಗುಣವನ್ನು ತುಸು ಬದಲಿಸಿದ್ದಾನೆ, ಹುಟ್ಟಿದ ಅವಳಿ ಮಕ್ಕಳಿಗೆ ತಂದೆಯ ಏಡ್ಸ್ ವೈರಾಣು ಬರುವುದನ್ನು ತಪ್ಪಿಸಿದ್ದಾನೆ ಎನ್ನುವುದು ಸುದ್ದಿಯ ಸಾರ. ಟೊಮೆಟೊ, ಆಲೂ, ಸೋಯಾ, ಹೊಗೆಸೊಪ್ಪು, ಜೋಳದಿಂದ ಹಿಡಿದು ಇಲಿ, ನಾಯಿ, ಬೆಕ್ಕು, ಹಂದಿ ಇತ್ಯಾದಿ ಪ್ರಾಣಿಗಳವರೆಗೆ ತಳಿನಕ್ಷೆಯನ್ನು ಮಾನವನೆಂಬ ಎರಡು ಕಾಲಿನ ಪ್ರಾಣಿ ಮಾರ್ಪಾಡು ಮಾಡುವುದನ್ನು ದಂಗುಬಡಿದು ನೋಡುತ್ತಿದ್ದ ಬ್ರಹ್ಮನಿಗೆ ಈ ಹೊಸ ಸುದ್ದಿ ತೀರಾ ಪ್ರಳಯಾಂತಕವೆನ್ನಿಸಿತು.

ಚೀನೀ ಸರ್ಕಾರ ಅವನನ್ನು ‘ಸರಿಯಾಗಿ ನೋಡಿಕೊಳ್ಳುತ್ತದೆ’, ಚಿಂತಿಸಬೇಡಿ ಪ್ರಭುವೇ ಎಂದು ನಾರದ ಸಮಾಧಾನಿಸಿದರೂ ಬ್ರಹ್ಮನ ತಳಮಳ ಕಡಿಮೆಯಾಗಲಿಲ್ಲ. ಹಿಂಗೆಲ್ಲ ಎಲ್ಲರೂ ತಮಗೆ ಬೇಕಿರುವ ಮನುಷ್ಯರನ್ನು ಸೃಷ್ಟಿಸುತ್ತ ಹೋದರೆ, ನನ್ನ ಕೆಲಸಕ್ಕಾದರೂ ಏನು ಬೆಲೆ ಎಂದೆಲ್ಲ ಚಿಂತೆಯಾಯಿತು ಬ್ರಹ್ಮನಿಗೆ. ಸಾಲದ್ದಕ್ಕೆ ಮೊದಲಿಂದ ಬ್ರಹ್ಮನ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದ ಇಂದ್ರ ಉಳಿದ ದೇವಪಡೆಯೊಂದಿಗೆ ಅಲ್ಲಿಗೆ ಬಂದ. ‘ಅಲ್ಲೋ ಮಾರಾಯ...ಅಂವಾ ಹಂಗ ಮಾಡ್ಯಾನಂದ್ರ ನೀನೇ ಹಣಿಬರಹ ಹಂಗ ಬರದಿ ಅಂದ್ಹಂಗಾತು’ ಇಂದ್ರ ತಲೆ ತಿನ್ನತೊಡಗಿದ. ಬೇರೆ ಸಸ್ಯ, ಪ್ರಾಣಿಗಳ ತಳಿಗುಣಗಳನ್ನು ತಿದ್ದುವ ತಿಕ್ಕಲುತನಗಳನ್ನು ಎಂದೆಂದೂ ಮಾಡಲಾಗದಂತೆ ಮನುಷ್ಯರ ಹಣೆಬರಹದಲ್ಲಿ ಯಾವ ಮಾರ್ಪಾಡು ಮಾಡಬೇಕೆಂದು ಚರ್ಚಿಸಲು ಬ್ರಹ್ಮನು ಅಶ್ವಿನೀ ದೇವತೆಗಳನ್ನು ಹುಡುಕಿಕೊಂಡು ಹೊರಟ.

ಚೀನಾ ಎದ್ದುಬಿದ್ದು ಆ ಯುವವಿಜ್ಞಾನಿಗೆ ಗೃಹಬಂಧನ ವಿಧಿಸಿದ್ದನ್ನು ಓದಿದ ಭರತಖಂಡದ ‘ಶಾ’ಣ್ಯಾ ಚಾಣಕ್ಯ ಮಾತ್ರ ಮೀಸೆಯಂಚಿನಲ್ಲಿ ನಸುನಕ್ಕ. ‘ಚಿಟಿಕೆ ಹೊಡೆಯುವಷ್ಟರಲ್ಲಿ ಭೋಪರಾಕು ಹೇಳುವ ಭಕ್ತಗಣಸೃಷ್ಟಿಸುವ ಸೋಷಿಯಲ್ ಮೀಡಿಯಾ ಎಂಬ ಮಾಯಾಯಂತ್ರ ನಮ್ಮ ಜೋಳಿಗೆಯಲ್ಲಿದೆ. ತಳಿಗುಣ, ಹಣೆಬರಹ ಏನಿದ್ದರೇನು, ಮಿದುಳನ್ನೇ ತಿದ್ದುವವರು ನಾವು’ ಎಂದು ‘ಶಾ’ಣ್ಯಾ ಮನದಲ್ಲೇ ಹೇಳಿಕೊಂಡಿದ್ದನ್ನು ಕೇಳಿಸಿಕೊಂಡ ನಾರದ ಇದನ್ನು ಬ್ರಹ್ಮನಿಗೆ ಉಸುರಲೇ ಬೇಡವೇ ಎಂದು ಚಿಂತಾಕ್ರಾಂತನಾದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.