ADVERTISEMENT

ಚುರುಮುರಿ: ಘ್ರಾಣಾಯಾಮ

ಲಿಂಗರಾಜು ಡಿ.ಎಸ್
Published 14 ಸೆಪ್ಟೆಂಬರ್ 2020, 19:31 IST
Last Updated 14 ಸೆಪ್ಟೆಂಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ತುರೇಮಣೆ ಸೌಹಾರ್ದ ಭೇಟಿಗೆ ಅಂತ ಹೊಂಟೆ. ತುರೇಮಣೆ ವ್ಯಾಯೋಗ ಗುರುವಾಗಿ ಕುಂತುದ್ರು. ‘ಇದೇನ್ಸಾ ಯಾವಾಗ ಗುರುಬೋದನೆ ತಗಂಡ್ರಿ?’ ಅಂತ ಕೇಳಿದೆ.

‘ಸರ್ಕಾರ ಗ್ಯಾನಭಾರತಿ ಯೋಗಪೀಠಕ್ಕೆ ಗುರುವಾಗಿ ನನ್ನನ್ನ ನೇಮಿಸ್ಯದೆ. ಮುಂದ್ಲ ಎಲೆಕ್ಷನ್ನೊತ್ತಿಗೆ ಯೋಗ್ಯ ಪಾಲಿಕೆಪಟುಗಳನ್ನ ತಯಾರ್ ಮಾಡಕ್ಕೆ ವ್ಯಾಯಾಮೋಹ, ಘ್ರಾಣಾಯಾಮ, ಉನ್ಮತ್ತ ಮೌಲ್ಯಗಳನ್ನ ಬೋದಿಸ್ತೀವಿ ಬಲ್ಲಿ ಅಂತ ಅರ್ಜಿ ಕರೆದಿದೀವಿ’ ಅಂದ್ರು.

‘ಯಾರ್‍ಯಾರು ಸೇರಿಕ್ಯಬೌದು?’ ಅಂದೆ.

ADVERTISEMENT

‘ನೋಡ್ಲಾ ಶಿಷ್ಯಕೀಟವೇ 60 ಮೀರಿದೋರಿಗೆ ಸೀಟಿಲ್ಲ. ಅಧಿಕಾರ ಇಲ್ಲದಾಗ ಪಾಲಿಕೆ ಅಧಿಕಾರಿಗಳಿಗೆ ಗೌರವವಾಗಿ ಶರಣಾಗುವುದೇ ಸಿದ್ಧಿ, ಧ್ಯಾನ-ಮೌನವೇ ಅಸ್ತ್ರ ಅಂತ ಬೋದಿಸ್ತೀವಿ’ ಅಂದರು.

‘ಮುಂದುಕ್ಕೇನು ಗುರುಗಳೇ’ ಅಂದೆ.

‘ಬಡ್ಡಿಹೈದ್ನೆ, ಮತಂ ಗತಂ ಸರ್ವನಾಶನಂ ಅನ್ನೋ ಬೀಜಮಂತ್ರ ಜಪಿಸಬೇಕು. ಈಗ ಸತ್ಯವಾಗಿ ಗಳಿಸಿದ್ದನ್ನು ಹಿತ-ಮಿತವಾಗಿ ಸೇವಿಸ
ಬೇಕು. ವತ್ತಾರೆಗೆ ವಾರ್ಡಿಗೋಗಿ ಮತದಾರರಿಗೆ ನಮಸ್ಕಾರಾಸನ ಹಾಕಬೇಕು. ಅಗತ್ಯಬಿದ್ದಲ್ಲಿ ರೇಚಕದೊಂದಿಗೆ ಸೊಂಟವನ್ನು ಮುಂದಕ್ಕೆ ಬಾಗಿಸಿ ಹಣೆಯನ್ನು ನೆಲಕ್ಕೆ ತಾಗಿಸಬೇಕು. ಸನ್ನುಗಳನ್ನ ತಲೆಮ್ಯಾಲೆ ಕುಂಡ್ರಿಸ್ಕ್ಯಂಡು ಸನ್‍ಸ್ಟ್ರೋಕ್ ವೊಡಸ್ಕಬಾರದು. ಸಂದೇವೊತ್ತಲ್ಲಿ ಪಕ್ಸದ ಹಿರೀಕರ ಜೊತೆಗೆ ಧರ್ಮಚಿಂತನೆ ನಡೆಸಿ ಸೀಟು ಗಟ್ಟಿ ಮಾಡಿಕ್ಯಬೆಕು. ರಾತ್ರಿಗೆ ಮತ್ತಿನ ಮಾತ್ರೆ, ಸೊಪ್ಪಿನ ಧೂಪ, ಕೊತ್ತಿಮಿರಿ ಜ್ಯೂಸು ವರ್ಜ್ಯ. ಇದು ಸಿಲಬಸ್ಸು’ ಅಂದ್ರು.

‘ಚೆನ್ನಾಗದೆ ಸಾ ಮುಂದೆ?’ ಅಂತ ಕೇಳಿದೆ.

‘ರಾತ್ರಿಕೆ ಕದ್ದು ಎಣ್ಣೆಸ್ನಾನ ಮಾಡಂಗಿಲ್ಲ! ನಿದ್ರೇಲಿ ಹೋರ್ಡಿಂಗ್ ಜಾಹೀರಾಥೂ, ಕಾಮಗಾರಿ, ಕಸದ ಅಕ್ರಮ, ಕೋವಿಡ್ ಕಂಟೈನ್ಮೆಂಟ್ ಶ್ರಮದಾನ, ನಕಲಿ ಬಿಲ್ಲುಗಳು ಭೂತವಾಗಿ ಬಂದು ಮೆಟರೆ ಹಿಸುಕಿದರೆ ಜಮೀರಾಯನಮಃ ಅಂತ ಸರ್ಕಾರಕ್ಕೆ ಆಸ್ತಿ ಬರೆದುಕೊಟ್ಟು ವಮನ ಕ್ರಿಯೆ ಮಾಡಿ ಯೋಗನಿದ್ರೆಗೆ ಹೋಗಬೇಕಾಯ್ತದೆ. ಯಾವುದೇ ಸ್ಕೀಮೋಲ್ಲಂಘನವಾದ್ರೆ ಸಸ್ಪೆಂಡ್ ಮಾಡಿ ಲೋಪಾಮುದ್ರೆ ಹಾಕಿ ಮನಿಗೆ ಕಳಿಸ್ತೀವಿ’ ಅಂದರು ಗುರುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.