ADVERTISEMENT

ಚುರುಮುರಿ | ಕ್ರಿಕೆಟ್ ಫೈಟ್

ಮಣ್ಣೆ ರಾಜು
Published 30 ಸೆಪ್ಟೆಂಬರ್ 2025, 23:30 IST
Last Updated 30 ಸೆಪ್ಟೆಂಬರ್ 2025, 23:30 IST
ಚುರುಮುರಿ
ಚುರುಮುರಿ   

ಆ ಊರು, ಈ ಊರಿನ ತಂಡಗಳ ನಡುವಿನ ದಸರಾ ಕಪ್ ಕ್ರಿಕೆಟ್ ಪಂದ್ಯಾವಳಿ ಕಾವೇರಿತ್ತು. ಎರಡು ಊರಿನವರು ಬದ್ಧ ವೈರಿಗಳು. ತಟಸ್ಥ ಸ್ಥಳದಲ್ಲಿ ಕ್ರಿಕೆಟ್ ಆಡುವುದರ ಹೊರತಾಗಿ ಈ ಊರುಗಳ ನಡುವೆ ಯಾವುದೇ ಸ್ನೇಹ, ಸಂಬಂಧಗಳಿಲ್ಲ.

ಜಿದ್ದಾಜಿದ್ದಿ ಪಂದ್ಯವನ್ನು ಕಣ್ತುಂಬಿಕೊಳ್ಳಲು ಎರಡೂರಿನ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಒಂದೆರಡು ಓವರ್ ಆಗಿದ್ದಾಗ ಬೌಲರ್ ಎಲ್‌ಬಿಡಬ್ಲ್ಯುಗೆ ಅಪೀಲ್ ಮಾಡಿದ.

ಅಂಪೈರ್ ತಲೆಯಾಡಿಸಿದರು. ಕೋಪಗೊಂಡ ಬೌಲರ್ ಬ್ಯಾಟರ್‌ನತ್ತ ಅಸಹ್ಯ ಸನ್ನೆ ಮಾಡಿದ. ಬ್ಯಾಟರೂ ಅಂತದ್ದೇ ಮಾಡಿದ. ವಿಕೆಟ್ ಕೀಪರ್ ಕಿಚಾಯಿಸಿದ. ಸಿಟ್ಟಿಗೆದ್ದ ಬ್ಯಾಟರ್ ಕೀಪರ್‌ಗೆ ಬ್ಯಾಟ್‌ನಲ್ಲಿ ಬಡಿದ. ರೊಚ್ಚಿಗೆದ್ದ ಬೌಲರ್ ಬಿರುಸಾಗಿ ಬಾಲ್ ಎಸೆದ, ಬ್ಯಾಟರ್‌ನ ಎರಡು ಹಲ್ಲು ಉದುರಿದವು.

ADVERTISEMENT

ಆಟಗಾರರು ಬ್ಯಾಟು, ಬಾಲು, ವಿಕೆಟ್ ಹಿಡಿದು ಬಡಿದಾಟಕ್ಕಿಳಿದರು. ಪ್ರೇಕ್ಷಕರೂ ಮೈದಾನಕ್ಕೆ ನುಗ್ಗಿ ಹೊಡೆದಾಡಿದರು.

ಪೊಲೀಸ್ ವ್ಯಾನ್, ಆ್ಯಂಬುಲೆನ್ಸ್ ಬಂದವು. ಪೊಲೀಸರು ಹೊಡೆದಾಟ ಬಿಡಿಸಿದರು. ಆ್ಯಂಬುಲೆನ್ಸ್‌ನವರು ಗಾಯಾಳುಗಳನ್ನು ಎತ್ತಿಕೊಂಡುಹೋದರು.

‘ಅಂಪೈರ್ ರಾಂಗ್ ಡಿಸಿಷನ್ ಕೊಟ್ಟಿದ್ದಕ್ಕೆ ಹೀಗಾಯ್ತು ಸಾರ್’ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಒಬ್ಬ ವರದಿ ಕೊಟ್ಟ.

‘ಅಂಪೈರ್‌ಗಳು ಎಲ್ಲಿ ಹೋದ್ರು?’ ಇನ್‌ಸ್ಪೆಕ್ಟರ್ ಕೇಳಿದರು.

‘ಇಂಜುರಿಯಾಗಿದ್ದ ಇಬ್ಬರೂ ಅಂಪೈರ್‌ಗಳನ್ನು ಆ್ಯಂಬುಲೆನ್ಸ್‌ನವರು ಎತ್ತಿಕೊಂಡು ಹೋದ್ರು ಸಾರ್’.

‘ಕಪ್ ನಮ್ದೇ...’ ಎಂದು ಎರಡು ಊರಿನವರು ಕಪ್ ಹಿಡಿದು ಕಿತ್ತಾಟ ಶುರು ಮಾಡಿದರು. ಅವರಿಂದ ಕಪ್ ಕಿತ್ತುಕೊಂಡ ಇನ್‌ಸ್ಪೆಕ್ಟರ್, ‘ಗೆದ್ದವರಿಗೆ ಕೊಡ್ತೀವಿ’ ಅಂದರು.

‘ಮತ್ತೆ ಮ್ಯಾಚ್ ಆಡಿಸ್ತೀರಾ ಸಾರ್? ಆಟಗಾರರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರಲ್ಲಾ’ ಅಂದ.

‘ಆಟಗಾರರು ಚೇತರಿಸಿಕೊಂಡ ನಂತರ ಪೊಲೀಸ್ ಕಾವಲಿನಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯ ಆಡಿಸ್ತೀವಿ...’ ಎಂದು ಹೇಳಿ ಇನ್‌ಸ್ಪೆಕ್ಟರ್ ಕಪ್ ತಗೊಂಡು ಜೀಪ್ ಹತ್ತಿ ಹೊರಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.