ADVERTISEMENT

ಚುರುಮುರಿ: ನಮ್ಮ ವೋಟು ಅವ್ರಿಗೆ...

ಸುಧೀಂದ್ರ
Published 26 ಮಾರ್ಚ್ 2021, 19:30 IST
Last Updated 26 ಮಾರ್ಚ್ 2021, 19:30 IST
   

ಬ್ಯಾಂಕಿನ ಕೆಲಸವಿತ್ತೂಂತ ಆಫೀಸಿಗೆ ರಜೆ ಹಾಕಿದ್ದೆ. ಬೇಗ ಮುಗೀತು. ಬಿಬಿಎಂಪಿಯಲ್ಲೊಂದು ಕೆಲಸ ಬಾಕಿಯಿತ್ತು. ಹೋದರೆ ಅಲ್ಲಿ ಜನವೋ ಜನ. ಪರಿಚಯದ ಲಕ್ಕಪ್ಪನೋರು ನನ್ನ ನೋಡಿ ಹಲ್ಕಿರಿದರು. ‘ಸಾರ್, ನೀವೂ ಐ.ಡಿ. ಕಾರ್ಡ್ ಸರೆಂಡರ್ ಮಾಡೋಕ್ಕೆ ಬಂದ್ರಾ?’ ಎಂದು ಗಾಬರಿಯಿಂದ ಪ್ರಶ್ನಿಸಿದರು. ‘ವೋಟರ್ಸ್ ಐ.ಡಿ.ಯಲ್ಲಿ ನನ್ನ ಮತ್ತು ಅಪ್ಪನ ಹೆಸರುಗಳು ಅದಲುಬದಲಾಗಿವೆ. ಕರೆಕ್ಷನ್ ಮಾಡಿಸ್ಬೇಕೂಂತ ಬಂದೆ’ ಅಂದೆ.

‘ತಮಿಳ್ನಾಡು ಎಲೆಕ್ಷನ್ ಮುಗಿದ ಮೇಲೆ ಬನ್ನಿ’ ಅಂದ್ರು ಲಕ್ಕಪ್ಪನವರು. ಅದಕ್ಕೂ ನಮಗೂ ಏನು ಸಂಬಂಧಾಂತ ಪ್ರಶ್ನಿಸುವಷ್ಟರಲ್ಲಿ ‘ಅಲ್ಲಿನ ವೋಟರ್ಸ್ ಲಿಸ್ಟಿಗೆ ಹೆಸರು ಸೇರಿಸೋಕ್ಕೆ, ಇಲ್ಲಿನ ಐ.ಡಿ. ಕ್ಯಾನ್ಸಲ್ ಮಾಡಿಸೋವ್ರು ಜಾಸ್ತಿಯಾಗಿದ್ದಾರೆ’ ಅಂದ್ರು.

ಮರುದಿನ ಬೆಳಿಗ್ಗೆ ಕಾಫಿ ಕುಡಿಯುವ ಹೊತ್ತಿಗೆ ಮನೆಗೆಲಸದ ಸೆಲ್ವಿ ಬಂದ್ಲು. ‘ಗವರ್ಮೆಂಟೋರೇ ಇನ್ಮೇಲೆ ಎಕ್ಸಾಮಲ್ಲಿ ಕಾಪಿ ಮಾಡೋಕ್ಕೆ ಬಿಡ್ತಾರಂತೆ, ಹೌದಾ ಅಂಕಲ್’ ಅಂತ ಪ್ರಶ್ನಿಸಿದಳು. ಪತ್ರಿಕೆಗಳನ್ನು ಓದಲು ಬರದಿದ್ದರೂ ಆಯಾ ಸಮಯದ ನ್ಯೂಸ್‍ಗಳನ್ನು ತಿಳ್ಕೊಳ್ಳೋದರಲ್ಲಿ ಅವಳು ಎಕ್ಸ್‌ಪರ್ಟ್.

ADVERTISEMENT

ತನ್ನಿಬ್ಬರು ಮಕ್ಕಳ ಎಕ್ಸಾಮ್ ಬಗ್ಗೆ ಸದಾ ಯೋಚನೆ ಮಾಡೋ ಸೆಲ್ವಿ ಇಂಥ ಬಾಂಬ್‍ಗಳನ್ನು ಆಗಾಗ ಎಸೀತಿರ್ತಾಳೆ. ಅವಳ ಪ್ರಶ್ನೆಗೆ ನಾನು ಕುಡೀತಿದ್ದ ಕಾಫಿ ಪೇಪರ್ ಮೇಲೆ ಕೊಂಚ ಚೆಲ್ತು.

ಮುಖಪುಟದಲ್ಲೇ ‘ಗೆದ್ರೆ ಕ್ಷೇತ್ರದ ಜನರಿಗೆಲ್ಲಾ ಚಂದ್ರನತ್ತ ಟೂರ್ ಕರ್ಕೊಂಡು ಹೋಗ್ತೀನಿ’ ಅನ್ನೋ ತಮಿಳುನಾಡು ರಾಜಕಾರಣಿಯೊಬ್ಬರ ಚಿತ್ರ ಪ್ರಕಟವಾಗಿತ್ತು. ‘ನಿಮ್ಮೂರಲ್ಲಿ ಕಾಫಿ ಮಿಶೀನ್ನೂ ವಾಷಿಂಗ್ ಮಿಶೀನ್ನೂ ಫ್ರೀಯಾಗಿ ಕೊಡ್ತಾರಂತೆ’ ಅಂದೆ.

‘ಹಾಗಿದ್ರೆ ನಾವೂ ಅಲ್ಲಿಗೇ ಶಿಫ್ಟ್‌ ಆಗೋಣ’ ಅಂದಳು ಹೆಂಡತಿ. ‘ಮಾತಾಡೋಕ್ಕೆ ನಿನಗೆ ತಮಿಳೇ ಬರೋಲ್ವಲ್ಲ’ ಅಂದೆ. ‘ಕಾಪಿ ಮಾಡಿ ಹೆಂಗೋ ಎಕ್ಸಾಂ ಪಾಸ್ ಮಾಡ್ಕೋತೀನಿ’ ಅಂದ್ಲು ಹೆಂಡ್ತಿ.

‘ಮನೆ ಕ್ಲೀನ್ ಮಾಡೋ ಮಿಶೀನೂ ಕೊಡ್ತಾರೆ’ ಎನ್ನುತ್ತಾ ಸೆಲ್ವಿ ಕಸಪೊರಕೆ ಕೈಗೆತ್ತಿಕೊಂಡ್ಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.