ADVERTISEMENT

ಗಣಪ-ಚಂದಪ್ಪರ ಚಿಂತೆ

ಸುಮಂಗಲಾ
Published 1 ಸೆಪ್ಟೆಂಬರ್ 2019, 18:33 IST
Last Updated 1 ಸೆಪ್ಟೆಂಬರ್ 2019, 18:33 IST
   

ಹಬ್ಬದ ದಿನ ಮೈಕಾಸುರ ‘ಗಜಮುಖನೇ ಗಣಪತಿಯೇ’ ಎಂದು ಅರಚುವುದಕ್ಕಿಂತಮೊದಲೇ ಗಣಪನಿಗೆ ಯಾರೋ ಪಾದ ಮುಟ್ಟಿದಂತೆ ಅನ್ನಿಸಿ ಎಚ್ಚರವಾಯಿತು. ಚಂದಪ್ಪ ಕುಂತಿದ್ದ. ಮುಖವೆಲ್ಲ ಕಂದಿಹೋಗಿತ್ತು. ಅಂದು ಡೊಳ್ಳುಹೊಟ್ಟೆ ಹೊತ್ತು, ಹೊಟ್ಟೆಗೊಂದು ಹಾವು ಸುತ್ತಿ, ಇಲಿ ಮೇಲೆ ಕೂತು ಗೌರವ್ವನನ್ನು ಕರೆದುಕೊಂಡು ಹೊರಟಿದ್ದ ತನ್ನನ್ನು ನೋಡಿ, ಅಪಹಾಸ್ಯದಲಿ ನಕ್ಕ ಚಂದಪ್ಪನೇ ಇವನು... ಗಣಪನಿಗೆ ಪಾಪ ಅನ್ನಿಸಿತು. ‘ಯಾಕೋ ಮಾರಾಯ... ಯಡ್ಯೂರಜ್ಜ ಹಾಲಿನ ಲೋಟಾನೂ ಕಸ್ಕಂಡ್ರು ಅಂತ ನಿಂಬೆಯಣ್ಣ ಮುಖ ಹುಳಿಮಾಡಿಕಂಡಂಗೆ ಕೂತಿದೀಯಲ್ಲ’ ಎಂದು ಅನುನಯಿಸಿದ.

‘ಒಂದು ಕಾಲದಲ್ಲಿ ಸೌಂದರ್ಯಕ್ಕೆ ಇನ್ನೊಂದು ಹೆಸರೇ ನಾನು ಅನ್ನೋ ಹಂಗಿದ್ದೆ. ಈ ಮನುಷ್ಯರು ಅದ್ಯಾವ್ಯಾವುದೋ ಮಿಶನ್ ಹೆಸರಲ್ಲಿ ನನ್ನ ಹತ್ರ ಬಂದ್ರು ಫೋಟೊ ತಕ್ಕಂಡ್ರು, ಬೆಂಗಳೂರಿನ ರಸ್ತೇಲಿ ತುಂಬಿರೋ ಗುಂಡಿಗಳಂಗೇ ಚಂದ್ರನ ಮೇಲೂ ಅವೆ ಅಂದ್ರು. ಐವತ್ ವರ್ಷದ ಹಿಂದೆ ನನ್ನ ಮೇಲೆ ಇಳಿದ ನಾಸಾದ ಮಂದಿ ಕಕ್ಕ ಮಾಡಿಟ್ಟಿದ್ದ ತೊಂಬತ್ತೈದು ಚೀಲಗಳನ್ನ ಅಲ್ಲೇ ಬಿಟ್ಟುಬಂದ್ರು. ನನ್ನ ದಕ್ಷಿಣ ಧ್ರುವನಾದ್ರೂ ಸೇಫ್‌ ಆಗಿದೆ ಅಂದ್ಕಂಡ್ರೆ ಅದೇನೋ ಚಂದ್ರಯಾನ- 2 ಲ್ಯಾಂಡರ್ ಅನ್ನು ಅಲ್ಲಿ ಇಳಿಸ್ತಾರಂತೆ. ಇನ್ ಈ ಮಂದಿ ಪ್ಲಾಸ್ಟಿಕ್ ಕಸದ ಗುಡ್ಡೇನ ನನ್ನ ಮೇಲೇ ತಂದು ಸುರಿತಾರೇನೋ ಅಂತ ಚಿಂತೆ ಶುರುವಾಗಿಬಿಟ್ಟಿದೆ... ಇವ್ರ ಚಂದ್ರಯಾನಗಳು ಯಶಸ್ವಿಯಾಗದೇ ಇರೋ ಹಂಗೆ ಏನರ ಮಾಡೋ ಮಾರಾಯ’ ಚಂದಪ್ಪ ಅಲವತ್ತುಕೊಂಡ.

‘ಅದ್ ನನ್ನ ಕೈಯಲ್ಲಿ ಇಲ್ಲೋಪ. ಆ ಇಸ್ರೊ ಅಧ್ಯಕ್ಷ ನಮ್ಮಪ್ಪ ಶಿವನ ಹೆಸರಷ್ಟೇ ಇಟ್ಟುಕೊಂಡಾನ... ಆದ್ರೆ ಅಂವ ಬೇಡ್ಕೊಳಾಕ ಹೋಗೋದೆಲ್ಲ ತಿರುಪತಿ, ಉಡುಪಿ ಹಿಂತಾ ಕಡಿಗಿ. ನನ್ನ ಚಿಂತೆಯೇ ಹಾಸಿ, ಹೊದ್ಕೊಳ
ವಷ್ಟಿದೆ. ಎಷ್ಟೋ ಕಂಪನಿಗಳು ಮಕಾಡೆ ಮಲ್ಕಂಡವಂತೆ. ನನ್ ಪೂಜೆ ಮಾಡಕ್ಕೆ ದುಡ್ಡಿಲ್ಲ ಅಂತ ಜನ ಅಳ್ತವರೆ. ಈ ಸಲ ಮಂಡಲ-ಪೆಂಡಾಲು ಎಲ್ಲಾನೂ ಕಡಿಮೆ. ಹೋಗೋ ಮಾರಾಯ’ ಎಂದ ಗಣಪ, ಮೈಕಾಸುರ ಎಬ್ಬಿಸುವುದಕ್ಕೆ ಕಾಯುತ್ತ ಮತ್ತೆ ಮಲಗಿದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.