ADVERTISEMENT

ಸರ್ಕಾರ, ಸಂಸಾರ!

ಬಿ.ಎನ್.ಮಲ್ಲೇಶ್
Published 25 ಜುಲೈ 2019, 19:51 IST
Last Updated 25 ಜುಲೈ 2019, 19:51 IST
ಚುರುಮುರಿ
ಚುರುಮುರಿ   

ಗಂಡ ತೆಪರೇಸಿಯ ಕೊರಳಪಟ್ಟಿ ಹಿಡಿದು ಠಾಣೆಗೆ ಎಳೆದುಕೊಂಡು ಬಂದ ಹೆಂಡತಿ ಪಮ್ಮಿ, ಅವನನ್ನು ಇನ್‌ಸ್ಪೆಕ್ಟರ್‌ ಎದುರು ನಿಲ್ಲಿಸಿ ‘ಸಾರ್, ಇವರು ಹದಿನೈದು ದಿನ ಮನೆ ಬಿಟ್ಟು ಹೋಗಿದ್ರು. ಎಲ್ಲಿಗೆ ಹೋಗಿದ್ರಿ ಅಂದ್ರೆ ಮುಂಬೈಗೆ ಅಂತಾರೆ. ಯಾಕೆ, ಏನು ಸ್ವಲ್ಪ ವಿಚಾರಿಸಿ’ ಎಂದು ಅಬ್ಬರಿಸಿದಳು.

ಇನ್‌ಸ್ಪೆಕ್ಟರ್‌ಗೆ ಗಾಬರಿಯಾಯಿತು. ‘ಸ್ವಲ್ಪ ಇರಮ್ಮ’ ಎಂದವರೇ ತೆಪರೇಸಿಯನ್ನು ಪ್ರಶ್ನಿಸಿದರು. ‘ಹದಿನೈದು ದಿನ ಮುಂಬೈಗೆ ಯಾಕಯ್ಯ ಹೋಗಿದ್ದೆ? ಅಲ್ಲೇನು ಮಾಡ್ತಿದ್ದೆ?’

‘ಅತೃಪ್ತ ಶಾಸಕರ ಜೊತೆ ಇದ್ದೆ ಸಾ, ಅವರಿಗೆ ಅದೂ ಇದೂ ತಂದು ಕೊಡೋದು, ದೇವಸ್ಥಾನಕ್ಕೆ ಕರ್ಕೊಂಡ್ ಹೋಗೋದು ಇತ್ಯಾದಿ ಹೆಲ್ಪ್ ಮಾಡ್ತಿದ್ದೆ’ ತೆಪರೇಸಿ ಬೆವರೊರೆಸಿಕೊಳ್ಳುತ್ತ ಹೇಳಿದ.

ADVERTISEMENT

‘ಸುಳ್ಳು ಸಾರ್, ಇವರು ಒಂದು ದಿನಾನೂ ಅವರ ಜೊತೆ ಟಿ.ವಿ.ಯಲ್ಲಿ ಕಾಣಿಸ್ಲಿಲ್ಲ. ಇವರು ಎಲ್ಲಿದ್ರು, ಯಾರ ಜೊತೆ ಇದ್ರು ಎಲ್ಲ ನಂಗೆ ಗೊತ್ತು’ ಪಮ್ಮಿ ವಾದಿಸಿದಳು.

‘ನೀನೂ ಅತೃಪ್ತ ಏನಯ್ಯ?’ ಇನ್‌ಸ್ಪೆಕ್ಟರ್‌ ಪ್ರಶ್ನೆ.

‘ನಂಗೆ ಅತೃಪ್ತಿ ಇಲ್ಲ ಸಾ, ಸ್ವಾಭಿಮಾನಕ್ಕೆ ಹೋಗಿದ್ದೆ. ಮನೇಲಿ ನಂಗೆ ಅಧಿಕಾರ ಇಲ್ಲ ಸಾ, ಅದ್ಕೆ...’ ತೆಪರೇಸಿ ಬಾಯಿಬಿಟ್ಟ.

‘ಏನಮ್ಮ ಇದು? ಗಂಡನಿಗೆ ಅಧಿಕಾರ ಕೊಡೋದಲ್ವ? ಎಲ್ಲ ನೀವೇ ನಡೆಸಿದ್ರೆ ಹೆಂಗೆ?’ ಇನ್‌ಸ್ಪೆಕ್ಟರ್‌ ಆಕ್ಷೇಪಿಸಿದರು.

‘ಅದ್ಕೆ ಆ ಕಮಲಳ ಜೊತೆ ಇವರು ಮುಂಬೈಗೆ ಹೋಗೋದು ಸರಿನಾ ಸಾ?’

‘ತಪ್ಪು’ ಎಂದ ಇನ್‌ಸ್ಪೆಕ್ಟರ್‌ ‘ಏಯ್ ದಫೇದಾರ್ ಇವನನ್ನ ಒದ್ದು ಒಳಗೆ ಹಾಕ್ರಿ’ ಎಂದರು.

‘ಇದು ಅನ್ಯಾಯ ಸಾ, ನನ್ ತರಾನೆ ಆ ಅತೃಪ್ತ ಶಾಸಕರೂ ಹದಿನೈದು ದಿನ ಮುಂಬೈನಲ್ಲಿದ್ರು. ಅವರಿಗೂ ಶಿಕ್ಷೆ ಕೊಡಿಸೋಕೆ ಆಗುತ್ತಾ ನಿಮಗೆ?’ ತೆಪರೇಸಿ ಗರಂ ಆದ.

‘ಏಯ್ ನಿಂದು ಸಂಸಾರ, ಅವರದು ಸರ್ಕಾರ ಕಣಯ್ಯ...’

‘ಎರಡೂ ಒಂದೇ ಸಾ. ಇಲ್ಲಿ ಕೇಳೋರಿದಾರೆ, ಅಲ್ಲಿ ಕೇಳೋರಿಲ್ಲ ಅಷ್ಟೇ ವ್ಯತ್ಯಾಸ’.

ತೆಪರೇಸಿ ವಾದಕ್ಕೆ ಇನ್‌ಸ್ಪೆಕ್ಟರ್‌ಗೆ ಮಾತೇ ಹೊರಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.