ADVERTISEMENT

ಚುರುಮುರಿ: ಇಂಡಿಯಾ ವಿತ್ ತೆಪರೇಸಿ!

ಬಿ.ಎನ್.ಮಲ್ಲೇಶ್
Published 12 ನವೆಂಬರ್ 2020, 19:31 IST
Last Updated 12 ನವೆಂಬರ್ 2020, 19:31 IST
ಚುರುಮುರಿ
ಚುರುಮುರಿ   

‘ಕಮಲೇ ಕಮಲೋತ್ಪತ್ತಿಹಿ, ಹಸ್ತ ಅಸ್ತವ್ಯಸ್ತಲೇ, ತೆನೆ ಭಾರವಾಯ್ತಲೇ ಪರಾಕ್!’ ಎಂದ ತೆಪರೇಸಿ.

‘ಏನ್ಲೆ ಇದು, ಕಾರಣಿಕನಾ? ಕಾರಣಿಕ ಅಂದ್ರೆ ಮುಂದೆ ಆಗೋದನ್ನ ಹೇಳೋದು. ನೀನು ಹಿಂದೆ ಆಗಿದ್ದನ್ನ ಹೇಳ್ತಿದೀಯ?’ ಗುಡ್ಡೆ ನಕ್ಕ.

‘ಅದಿರ‍್ಲಿ, ಕಮಲೇ ಕಮಲೋತ್ಪತ್ತಿ ಅಂದ್ರೆ ಏನ್ಲೆ ತೆಪರಾ?’ ದುಬ್ಬೀರ ಕೇಳಿದ.

ADVERTISEMENT

‘ಅದಾ? ಯಡ್ಯೂರಪ್ಪನೋರ ಮುಖವೆಂಬ ಕಮಲದಲ್ಲಿ ಈಗ ಶಿರಾ, ರಾರಾ ಎಂಬ ಕಮಲಗಳು ಅರಳಿದಾವೆ ಅಂತ ಅರ್ಥ, ಗೊತ್ತಾತ?’ ತೆಪರೇಸಿ ಬಿಡಿಸಿ ಹೇಳಿದ.

‘ಓ, ಹಂಗಾ? ಮತ್ತೆ ಕಮಲೇ ಕಮಲೋತ್ಪತ್ತಿ ತರ ಹಸ್ತೇ ಹಸ್ತೋತ್ಪತ್ತಿ ಅಂತ ಇಲ್ವ?’

ದುಬ್ಬೀರನ ಪ್ರಶ್ನೆಗೆ ನಕ್ಕ ತೆಪರೇಸಿ ‘ಹ್ಞೂನಪ, ಹಂಗೆ ಹಸ್ತಗಳು ಜಾಸ್ತಿ ಉತ್ಪತ್ತಿ ಆಗೇ ಹಸ್ತಕ್ಷೇಪಗಳು ಶುರುವಾಗಿ ಬೈ ಎಲೆಕ್ಷನ್ ಸೋಲೋಕೆ ಕಾರಣ’ ಎಂದ.

‘ಮತ್ತೆ ತೆನೆ?’

‘ತೆನೆ ಕತೆ ಬ್ಯಾಡ ಬಿಡಪ, ತೆನೆ ಹೊರೆಯಾಗಿ ಭಾರ ಆತು ಅನ್ಸುತ್ತೆ...’ ತೆಪರೇಸಿ ತಿಪ್ಪೆ ಸಾರಿಸಿದ.

‘ಯಾಕೋ ಎಲ್ಲ ಕಡಿ ಕಮಲದ ಹವಾ ಜೋರೈತಪ. ದೇಶದಾಗೆಲ್ಲ ಕಮಲ ಅರಳಿದ್ರೆ ಅಲ್ಲಿ ಅಮೆರಿಕದಲ್ಲೂ ‘ಕಮಲವ್ವ’ ಅರಳಿದ್ಲು ಅಲ್ವ?’ ಗುಡ್ಡೆ ಅಮೆರಿಕಕ್ಕೆ ಹಾರಿದ.

‘ಹೌದು, ನಾವೀಗ ಇಂಡಿಯಾ ವಿತ್ ಅಮೆರಿಕದ ಕಮಲವ್ವ, ಸರಿನಾ?’

‘ಅಲ್ಲೋ ದುಬ್ಬೀರ, ಇಂಡಿಯಾ ವಿತ್ ಕಮಲವ್ವ ಸರಿ, ಇಲ್ಯಾರೋ ಒಬ್ಬ ಪತ್ರಕರ್ತ ಇಡೀ ಇಂಡಿಯಾ ನನ್ನ ಜತಿ ಐತಿ ಅಂತ ಟೀವಿಲಿ ತೋರಿಸ್ತಿದ್ನಪ...’

‘ಹೌದಾ? ನಾನೂ ಹೇಳ್ತೀನಿ, ‘ಇಂಡಿಯಾ ವಿತ್ ತೆಪರೇಸಿ’ ಅಂತ. ಏನೀಗ?’ ತೆಪರೇಸಿ ಮಾತಿಗೆ ದುಬ್ಬೀರನಿಗೆ ನಗು ತಡೆಯೋಕೆ ಆಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.