ADVERTISEMENT

ಚುರುಮುರಿ: ಗೇಮ್ ಪ್ಲಾನ್

ಮಣ್ಣೆ ರಾಜು
Published 28 ಜನವರಿ 2026, 0:25 IST
Last Updated 28 ಜನವರಿ 2026, 0:25 IST
   

‘ಟಿವಿಯಲ್ಲಿ ಬರೀ ಕ್ರಿಕೆಟ್ ನೋಡ್ತಿರ್ತೀರಿ, ನಾನು ಸೀರಿಯಲ್ ನೋಡ್ಬೇಕು...’ ಸಿಟ್ಟಿನಿಂದ ಸುಮಿ ಗಂಡನಿಂದ ರಿಮೋಟ್ ಕಿತ್ತುಕೊಂಡಳು.

‘ಛೇ! ಸರ್ಕಾರದಲ್ಲಿ ಕುರ್ಚಿ ಕಚ್ಚಾಟ, ಸಂಸಾರದಲ್ಲಿ ರಿಮೋಟ್ ಕಿತ್ತಾಟ, ಒಳ್ಳೆಯ ಬೆಳವಣಿಗೆಯಲ್ಲ... ಕ್ರಿಕೆಟ್ ನೋಡೋದ್ರಿಂದ ಕ್ರೀಡಾಸ್ಫೂರ್ತಿ ಬೆಳೆಯುತ್ತದೆ’ ಅಂದ ಶಂಕ್ರಿ.

‘ಮಗ ಮೊಬೈಲ್‌ನಲ್ಲಿ ಗೇಮ್ ಆಡೋದನ್ನು ಕಲಿತಿದ್ದಾನೆ! ಕೇಳಿದ್ರೆ ಕ್ರೀಡಾಸ್ಫೂರ್ತಿ ಅಂತಾನೆ... ಮಕ್ಕಳು ಮೈದಾನದಲ್ಲಿ ಆಡೋದು ಬಿಟ್ಟು ಮೊಬೈಲ್‌ನಲ್ಲಿ ಆಡಲು ಶುರು ಮಾಡಿವೆ’.

ADVERTISEMENT

‘ನಿನಗೆ ಗೊತ್ತಾ? ಬಾಂಗ್ಲಾ ತಂಡ ಈ ಬಾರಿ ವಿಶ್ವಕಪ್ ಆಡೋದಿಲ್ಲವಂತೆ’.

‘ವಿಶ್ವಕಪ್‌ನಿಂದ ಬಾಂಗ್ಲಾದೇಶ ಔಟ್, ಪಾಕಿಸ್ತಾನ ಡೌಟ್ ಅಂತ ಗೊತ್ತು. ವಿಶ್ವಕಪ್, ಏಷ್ಯಾ ಕಪ್, ಕಾಫಿ ಕಪ್, ಟೀ ಕಪ್ ಅಂತ ವರ್ಷಪೂರಾ ಕ್ರಿಕೆಟ್ ಮ್ಯಾಚ್ ನಡೆಯುತ್ತಲೇ ಇರ್ತವೆ, ನೀವು ಕೆಲ್ಸಕಾರ್ಯ ಬಿಟ್ಟು ನೋಡ್ತಾ ಇರಿ’.

‘ಗೆಲುವಿಗೆ ಹೇಗೆ ಗೇಮ್ ಪ್ಲಾನ್ ಮಾಡಬೇಕು ಎಂದು ಕ್ರಿಕೆಟ್ ನೋಡಿ ಕಲಿಯಬಹುದು’.

ಚಾನೆಲ್ ಚೇಂಜ್ ಮಾಡಿದ ಸುಮಿ, ‘ಈ ಸೀರಿಯಲ್ ನೋಡಿ, ಅತ್ತೆಯನ್ನು ಬಗ್ಗಿಸೋದು, ಸೊಸೆಯನ್ನು ಪಳಗಿಸೋದು, ನಾದಿನಿಯನ್ನು ನಿಯಂತ್ರಿಸುವುದು ಹೇಗೆ ಎನ್ನುವ ಗೇಮ್ ಪ್ಲಾನ್ ಅನ್ನು ಈ ಸೀರಿಯಲ್‌ನಿಂದ ಕಲಿಯಬಹುದು’.

‘ಅದಕ್ಕಿಂಥಾ ನ್ಯೂಸ್ ಚಾನೆಲ್ ಹಾಕು, ರಾಜಕಾರಣಿಗಳ ಬೈದಾಟ, ಹುಯ್ದಾಟ, ಕಿತ್ತಾಟಗಳನ್ನು ನೋಡಿದರೆ ಗೇಮ್ ಪ್ಲಾನ್ ಗಮ್ಮತ್ತು ಗೊತ್ತಾಗುತ್ತದೆ’.

‘ಗಾಂಧೀಜಿ ಟೀಮ್ ವರ್ಸಸ್ ಜಿ ರಾಮ್‌ ಜಿ ಟೀಮ್ ನಡುವಿನ ಆಟ ಮುಗಿಯುವಂತೆ ಕಾಣ್ತಿಲ್ಲ, ಪಂದ್ಯ ಡ್ರಾ ಆಗಬಹುದಾ?’

‘ಅದು ಸಿಂಗಲ್ ಸ್ಕೀಮ್‌ನ ಡಬಲ್ ಗೇಮ್, ಡ್ರಾನೂ ಆಗಲ್ಲ, ವಿತ್‌ಡ್ರಾನೂ ಆಗಲ್ಲ. ಮುಂದಿನ ಎಲೆಕ್ಷನ್ ಗೇಮ್ ಗೆಲ್ಲಲು ರಾಜಕೀಯ ತಂಡಗಳು ನಡೆಸಿರುವ ತಾಲೀಮಿನ ಗಿಮಿಕ್ ಗೇಮ್ ಅಷ್ಟೇ...’ ಎಂದು ಶಂಕ್ರಿ ಟಿವಿ ಆಫ್ ಮಾಡಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.