ADVERTISEMENT

ಮತ ಮುಹೂರ್ತ

ಮಣ್ಣೆ ರಾಜು
Published 4 ಡಿಸೆಂಬರ್ 2019, 17:43 IST
Last Updated 4 ಡಿಸೆಂಬರ್ 2019, 17:43 IST
   

ಗುರೂಜಿ ಕಣ್ಣು ಮುಚ್ಚಿ ಧ್ಯಾನಾಸಕ್ತರಾಗಿದ್ದರು. ನಂತರ ಕಣ್ಣು ತೆರೆದು ಎದುರು ಕುಳಿತಿದ್ದ ಶಂಕ್ರಿ, ಸುಮಿ ಮೇಲೆ ದೃಷ್ಟಿ ಹರಿಸಿದರು.

‘ದಾಂಪತ್ಯ ಕಲಹ, ಆರ್ಥಿಕ ಸಂಕಷ್ಟ, ಮಕ್ಕಳ ಮೊಬೈಲ್ ಕಾಯಿಲೆ... ಏನು ನಿಮ್ಮ ಸಮಸ್ಯೆ?’ ಕೇಳಿದರು.

‘ನಮ್ಮ ಮದುವೆಗೆ ತಾವೇ ಮುಹೂರ್ತ ಇಟ್ಟಿದ್ದು. ನಾವು ಜಗಳವಾಡಿಕೊಂಡು ಅನ್ಯೋನ್ಯ
ವಾಗಿದ್ದೇವೆ, ಸಮಸ್ಯೆ ಇಲ್ಲ’ ಅಂದ ಶಂಕ್ರಿ.

ADVERTISEMENT

‘ಬೈ ಎಲೆಕ್ಷನ್‍ನಲ್ಲಿ ಮತ ಹಾಕಲು ಒಳ್ಳೆಯ ಮುಹೂರ್ತ ಫಿಕ್ಸ್ ಮಾಡಿಕೊಡಿ’ ಸುಮಿ ಕೋರಿದಳು.

‘ಹೌದು ಗುರೂಜಿ, ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ, ಮತ ಚಲಾವಣೆ ನಡೆದರೆ ಸಂಸಾರ, ಸರ್ಕಾರಗಳು ಡೈವೋರ್ಸ್ ಆಗದೆ, ಅನ್ಯೋನ್ಯವಾಗಿ ದೀರ್ಘಕಾಲ ಬಾಳಿಕೆ ಬರುತ್ತವೆ’ ಶಂಕ್ರಿ ಹೇಳಿದ.

‘ಮುಂಡಾಮೋಚ್ತು... ಕಳೆದ ಚುನಾವಣೆಯಲ್ಲಿ ನೀವೆಲ್ಲಾ ರಾಹುಕಾಲದಲ್ಲಿ ವೋಟ್ ಮಾಡಿದ ಪರಿಣಾಮ ಈಗ ಬೈ ಎಲೆಕ್ಷನ್ ವಕ್ಕರಿಸಿಕೊಂಡಿದೆ’ ಅಂದರು ಗುರೂಜಿ.

‘ಎಲೆಕ್ಷನ್ ಗೆದ್ದವರು ಕಷ್ಟ-ಸುಖ ಸಹಿಸಿಕೊಂಡು ಸರ್ಕಾರದ ಜೊತೆ ಹೊಂದಿಕೊಂಡು ಹೋಗಬೇಕಲ್ವಾ ಗುರೂಜಿ?’

‘ಎಲೆಕ್ಷನ್ ಕ್ಯಾಂಡಿಡೇಟ್‍ಗಳಿಂದ ಮುಯ್ಯಿ ಪಡೆದಿದ್ದೀರಾ?’

‘ಹೌದು ಗುರೂಜಿ, ಬೆಳ್ಳಿ ಲೋಟ, ಚಿನ್ನದ ಉಂಗುರ ತಗೊಂಡಿದ್ದೀವಿ’ ಸುಮಿಗೆ ಮುಜುಗರ.

‘ಮುಂಡಾಮೋಚ್ತು, ಮುಯ್ಯಿ ತಗೊಂಡು ಮತ ಹಾಕಿದ್ರೆ ಉದ್ಧಾರವಾಗುತ್ತೇನ್ರೀ...’ ಗುರೂಜಿ ಗುರ್ ಅಂದರು.

‘ಒಳ್ಳೆ ಮುಹೂರ್ತ ನೋಡಿಕೊಡ್ತೇನೆ’ ಎಂದು ಗುರೂಜಿ ಪುಸ್ತಕ ತೆರೆದು, ಐದಾರು ಪುಟ ತಿರುಗಿಸಿ, ಬೆರಳು ಎಣಿಸಿ, ಮನಸಿನಲ್ಲೇ ಗುಣಿಸಿ ಬರೆದುಕೊಟ್ಟರು.

‘ತಗೊಳ್ಳಿ, ಮತದಾನದ ದಿನ ನೀವು ಎಷ್ಟು ಹೊತ್ತಿಗೆ ಮನೆ ಬಿಡಬೇಕು, ಮತಗಟ್ಟೆಯಲ್ಲಿ ಯಾವ ಟೈಮಿಗೆ ಕ್ಯೂ ನಿಲ್ಲಬೇಕು, ಎಷ್ಟು ಗಂಟೆ
ಯೊಳಗೆ ಮತ ಚಲಾಯಿಸಬೇಕು ಎಂಬುದನ್ನು ಬರೆದಿದ್ದೇನೆ, ಅದನ್ನು ಅನುಸರಿಸಿ ಮತ ಚಲಾಯಿಸಿ ಸರ್ಕಾರಕ್ಕೆ ಶ್ರೇಯಸ್ಸಾಗುತ್ತದೆ’ ಎಂದರು.

ಕಾಣಿಕೆ ಕೊಟ್ಟು, ಕೈ ಮುಗಿದು ಶಂಕ್ರಿ, ಸುಮಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.