ADVERTISEMENT

ಕೀಪ್ ಸೈಲೆನ್ಸ್...

ಮಣ್ಣೆ ರಾಜು
Published 29 ಜನವರಿ 2020, 19:46 IST
Last Updated 29 ಜನವರಿ 2020, 19:46 IST
   

ಪಿಯುಸಿ ಪರೀಕ್ಷೆಗೆ ಮಗಳು ಸಿದ್ಧವಾಗುತ್ತಿ ರುವ ಕಾರಣ ಶಂಕ್ರಿ, ಸುಮಿ ಮನೆಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ‘ಕೀಪ್ ಸೈಲೆನ್ಸ್, ನಾಟ್ ವಯಲೆನ್ಸ್’ ಎನ್ನುವಂತೆ ಗಂಡ-ಹೆಂಡ್ತಿ ತಮ್ಮ ಸಹಜ, ಸಾಂಪ್ರದಾಯಿಕ ಜಗಳಗಳನ್ನು ಮಗಳ ಪರೀಕ್ಷೆ ಮುಗಿಯುವ ತನಕ ಪೆಂಡಿಂಗ್ ಇಟ್ಟಿದ್ದಾರೆ.

‘ನಾಯಿ ಇದೆ, ಎಚ್ಚರಿಕೆ’ ಎಂಬಂಥ ಗೇಟಿನ ಮೇಲಿನ ಫಲಕದ ರೀತಿ, ‘ಪರೀಕ್ಷೆಗೆ ಓದುವ ಮಗಳು ಮನೆಯಲ್ಲಿದ್ದಾಳೆ, ಎಚ್ಚರಿಕೆ’ ಎಂಬ ಬೋರ್ಡ್ ಹಾಕದೆಯೇ ಮನೆಗೆ ಬರುವವರನ್ನು ಅವಾಯ್ಡ್ ಮಾಡಿದ್ದಾರೆ.

ಟಿ.ವಿ ಸೀರಿಯಲ್, ರಾಜಕಾರಣ, ನೆರೆಮನೆ ಯವರ ಕೆಲಸಕ್ಕೆ ಬಾರದ ವಿಚಾರಗಳನ್ನು ಮನೆಯಲ್ಲಿ ಚರ್ಚಿಸುವುದನ್ನು ನಿರ್ಬಂಧಿಸಿಕೊಂಡಿದ್ದಾರೆ. ಮನೆಯ ಯಾವುದೇ ಮಾತುಕತೆ ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥ್ಸ್, ಬಯಾಲಜಿ ವ್ಯಾಪ್ತಿಯಲ್ಲೇ ಇರುವಂತೆ ನೋಡಿಕೊಂಡಿದ್ದಾರೆ.

ADVERTISEMENT

ಟಿ.ವಿ ಆಫ್ ಆಗಿದೆ, ಮೊಬೈಲ್ ಮ್ಯೂಟ್ ಆಗಿದೆ. ಒಗ್ಗರಣೆ ಸೌಂಡು, ಘಾಟು ಹೆಚ್ಚಾಗದಂತೆ ಎಚ್ಚರಿಕೆಯಿಂದ ಸುಮಿ ಅಡುಗೆ ಮಾಡುತ್ತಿದ್ದಾಳೆ. ಮಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಮೆಡಿಕಲ್ ಸೀಟು ಪಡೆಯಬೇಕು ಎಂದು ದೇವರಿಗೆಸುಮಿ ಹರಕೆ ಹೊತ್ತಿದ್ದಾಳೆ. ದೇವರ ಮನೆಯಲ್ಲಿ ಹಚ್ಚಿರುವ ತುಪ್ಪದ ದೀಪ ಆರದಂತೆ ನೋಡಿಕೊಂಡಿದ್ದಾಳೆ. ಪ್ರಧಾನಿ ಮೋದಿಯವರ ಪರೀಕ್ಷಾ ಟಿಪ್ಸ್ ಅನುಸರಿಸುತ್ತಿದ್ದಾರೆ. ಹಿರಿಯರು, ಅನುಭವಿಗಳು ಹೇಳಿದ ಪರೀಕ್ಷಾ ಪಥ್ಯಗಳನ್ನು ಪಾಲಿಸುತ್ತಿದ್ದಾರೆ.

ಪರೀಕ್ಷೆಗೆ ಸಿದ್ಧವಾಗುತ್ತಿರುವ ಮಗಳ ಆರೋಗ್ಯದಲ್ಲಿ ಏರುಪೇರಾಗಬಾರದೆಂದು ಫ್ಯಾಮಿಲಿ ಡಾಕ್ಟರನ್ನು ಕನ್ಸಲ್ಟ್ ಮಾಡಿ ಸಲಹೆ ಪಡೆದಿದ್ದಾರೆ. ಮಗಳ ಕೆಮ್ಮು, ನೆಗಡಿ, ಜ್ವರ, ತಲೆನೋವು, ಸೀನು, ಆಕಳಿಕೆ, ತೂಕಡಿಕೆ ನಿವಾರಿಸುವ ಮಾತ್ರೆ, ಮದ್ದನ್ನು ಇಟ್ಟುಕೊಂಡಿದ್ದಾರೆ.

ಶಂಕ್ರಿಯ ತಾಯಿ ಕೊನೇ ಜೀವ ಹಿಡಿದು, ಹಾಸಿಗೆ ಹಿಡಿದಿದ್ದಾಳೆ. ಮೊಮ್ಮಗಳು ಡಾಕ್ಟರಾಗಿ ತನಗೊಂದು ಇಂಜೆಕ್ಷನ್ ಚುಚ್ಚಬೇಕು ಎಂಬುದು ಅಜ್ಜಿಯ ಕೊನೆ ಆಸೆ. ತಾಯಿಯ ಆಸೆ ಈಡೇರಿಸಲು, ಮನೆತನದ ಘನತೆ ಹೆಚ್ಚಿಸಿಕೊಳ್ಳಲು ಮಗಳನ್ನು ಡಾಕ್ಟರ್ ಮಾಡಬೇಕು ಎಂಬುದು ಶಂಕ್ರಿಯ ಸಂಕಲ್ಪ. ಹೀಗಾಗಿ, ಡಾಕ್ಟರ್‌ ಆಗಲೇಬೇಕಾದ ಅನಿವಾರ್ಯದಲ್ಲಿ ಮಗಳು ಸಿಲುಕಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.