ADVERTISEMENT

ಚುರುಮುರಿ| ಲಾಕ್‌ಡೌನ್ ರಿಯಾಯಿತಿ

ಕೆ.ವಿ.ರಾಜಲಕ್ಷ್ಮಿ
Published 7 ಫೆಬ್ರುವರಿ 2021, 19:30 IST
Last Updated 7 ಫೆಬ್ರುವರಿ 2021, 19:30 IST
Churumuri-08022021
Churumuri-08022021   

‘ಕಾಫಿ ಸ್ವಲ್ಪ ಬಿಸಿಯಿದ್ದಿದ್ರೆ...’ ರಾಗವೆಳೆದೆ.

‘ಕೊಟ್ಟ ತಕ್ಷಣ ಕುಡಿದಿದ್ರೆ ಈ ಆಕ್ಷೇಪಣೆ ಬರ್ತಿರಲಿಲ್ಲ’ ನನ್ನವಳ ವಿರಾಗ.

‘ಗ್ಯಾಸ್ ಬೆಲೆ ಏರಿಕೆಯಾಗಿದೆ. ಅಷ್ಟೇ ಅಲ್ಲ ದಿನಸಿ, ಎಣ್ಣೆ ಎಲ್ಲಾ ಏರುಮುಖ’ ಅತ್ತೆಯ ಸಪೋರ್ಟ್.

ADVERTISEMENT

‘ಈ ಬಾರಿ ಬಜೆಟ್‌ನಲ್ಲೂ ನಮ್ಮ ಮಧ್ಯಮ ವರ್ಗಕ್ಕೆ ಹೆಚ್ಚಿನ ಉಪಯೋಗ ಕಾಣಲಿಲ್ಲ. ತೆರಿಗೆ ಸ್ಲ್ಯಾಬ್ ಹಾಗೇ ಮುಂದುವರಿದಿದೆ’ ನಾನು ವಿಷಯ ಬದಲಿಸಿದೆ.

‘ಅದ್ಯಾಕೆ ಹಾಗಂತೀರಿ? ನಮ್ಮ ಮೆಟ್ರೊನ ಗಮನಿಸಿದ್ದಾರೆ, ಅನುದಾನದ ಕೃಪೆ ಸಿಕ್ಕಿದೆ. ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ. ಹೀಗಾಗಿ ನಾಳೆ ಆಟೊ, ಕ್ಯಾಬ್ ದರ ದುಬಾರಿಯಾದರೆ ಮೆಟ್ರೊಲಿ ಆರಾಮಾಗಿ ಕಡಿಮೆ ದರದಲ್ಲಿ ಟ್ರಾಫಿಕ್ ಕಿರಿಕಿರಿಯಿಲ್ಲದೆ ಜಾಸ್ತಿ ಅಡ್ಡಾಡ ಬಹುದು’ ನನ್ನವಳು ಹಣಕಾಸು ಸಚಿವರ ಪರ ನಿಂತಳು.

‘ಅಪ್ಪಾ, ಪಾಕೆಟ್ ಮನಿ ಹೆಚ್ಚಿಸಿ ಪ್ಲೀಸ್’ ಪುಟ್ಟಿಯ ಅಹವಾಲು.

‘ಯಾಕೋ? ಕಾಲೇಜು ತಡವಾಗಿ ಶುರು
ವಾಗಿದ್ದಕ್ಕೆ ಸ್ಪೆಷಲ್ ಕ್ಲಾಸ್ ಇದೆಯಾ? ಚಿತ್ರ
ಮಂದಿರಕ್ಕೆ ನೂರು ಶತ ಭರ್ತಿಗೆ ಅವಕಾಶ, ಅದರ ಆಕರ್ಷಣೆ?’ ಹುಬ್ಬೇರಿಸಿದೆ.

‘ಚಿತ್ರದಲ್ಲಿ ಎರಡು ಇಂಟರ್‌ವಲ್‌ಗಳು- ಬಾಯಾಡಿಸಲು ಎರಡು ಬಾರಿ ಕುರುಕಲು ಕೊಳ್ಳೋಕ್ಕೆ’ ನನ್ನವಳು ಪಾಯಿಂಟ್ ಹಾಕಿದಳು. ಪುಟ್ಟಿ ಕಣ್ಣು ಮಿಟುಕಿಸಿದಳು.

ಅಷ್ಟರಲ್ಲೇ ಕಂಠಿ ವಾಕಿಂಗ್ ಮುಗಿಸಿ ನೇರ ನಮ್ಮ ಮನೆಗೇ ಬಂದ. ‘ಬಾಸ್ ತಮ್ಮನ ಮದುವೆ, ನಾಳೆ ರಾತ್ರಿ ವರಪೂಜೆ, ಆರತಕ್ಷತೆ ಎಲ್ಲಕ್ಕೂ ನನ್ನದೇ ಮೇಲ್ವಿಚಾರಣೆ. ಇನ್‌ಕ್ಲೂಡಿಂಗ್ ರಿಟರ್ನ್ ಗಿಫ್ಟ್, ಒಂದು ಎಕ್ಸ್‌ಟ್ರಾ ಕರೆಯೋಲೆ ಕೊಟ್ಟಿದ್ದಾರೆ, ನಿಮಗೆ ಬೇಕಾದವರನ್ನು ಕರೆಯಿರಿ ಅಂತ. ಹೇಗೂ ಸಭೆ ಸಮಾರಂಭಗಳಿಗೆ ಸೇರಬಹುದಾದ ಜನರ ಸಂಖ್ಯೆ ಏರಿಸಿದ್ದಾರಲ್ಲ? ಥ್ಯಾಂಕ್ಸ್ ಟು ಲಾಕ್‌ಡೌನ್ ರಿಯಾಯಿತಿ’ ಎಂದ. ನಾನು ಆಸೆಯಿಂದ ನೋಡಿದೆ.

‘ಛತ್ರಕ್ಕೆ ನಾಳೆ ಸಂಜೇನೇ ಬಂದ್ಬಿಡಿ. ರಿಸೆಪ್ಷನ್, ಬಫೆ ಮುಗಿಸಿ ವಾಪಸಾದರಾಯಿತು’ ಲಗ್ನಪತ್ರಿಕೆ ಚಾಚಿದ.

‘ಬಿಸಿ ಕಾಫಿ ತಂದೆ ಸುಧಾರಿಸಿಕೊಳ್ಳಿ’. ಫ್ಯಾನ್ ಹಚ್ಚಿ ಅಡುಗೆ ಮನೆಗೆ ಹೋದಳು ನನ್ನವಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.