ADVERTISEMENT

ಮಹಿಷ ಬಂಧನ ಸೂತ್ರ!

ಗುರು ಪಿ.ಎಸ್‌
Published 1 ಅಕ್ಟೋಬರ್ 2019, 20:00 IST
Last Updated 1 ಅಕ್ಟೋಬರ್ 2019, 20:00 IST
   

‘ಜಗಜ್ಜನನಿ, ಇದೇನಾಶ್ಚರ್ಯ... ಆಸ್ಥಾನಕ್ಕೆ ನಿಮ್ಮ ಪ್ರವೇಶ’ ನಡು ಬಗ್ಗಿಸಿ, ತಲೆ ತಗ್ಗಿಸಿ ಕೇಳಿದ ಖಜಾನಾಧಿಕಾರಿ.

‘ದೊರೆಯ ದರ್ಬಾರ್ ನೋಡಬೇಕೆಂಬ ಬಯಕೆಯಿಂದ ಖುದ್ದಾಗಿ ಬಂದೆ’ ಹಸನ್ಮುಖದಿ ನುಡಿದಳು ಚಾಮುಂಡೇಶ್ವರಿ.

‘ಎಲ್ಲಿ, ದೊರೆಯೇ ಕಾಣುತ್ತಿಲ್ಲ?’

ADVERTISEMENT

‘ಅವರು ತಂತಿಯ ಮೇಲೆ ನಡೆಯುತ್ತಿದ್ದಾರೆ ದೇವಿ’.

‘ಕೆಳಗೆ ಕಪ್ಪುಮಣ್ಣಿನ ನಾಡು, ಮೇಲೆ ಸ್ವರ್ಗದಂಥ ಕಾಶ್ಮೀರ ಇದ್ದರೂ, ಅವರೇಕೆ ಮಧ್ಯದ ತಂತಿಯನ್ನು ಆರಿಸಿಕೊಂಡರು’ ಯೋಚನಾಮಗ್ನಳಾಗಿ ಕೇಳಿದಳು ಈಶ್ವರಿ.

‘ಕೆಳಗಿಳಿದರೆ ಪ್ರಜೆಗಳು ಬಿಡುವುದಿಲ್ಲ, ಮೇಲಿರುವ ರಾಜಾಧಿರಾಜ ಸಂಪತ್ತು ಕೊಡುತ್ತಿಲ್ಲ. ಹೀಗಾಗಿ, ತಂತಿಯೇ ಗತಿಯಾಗಿದೆ ಮಾತೆ’.

‘ಆಸ್ಥಾನದ ಮುಖ್ಯ ವಿದ್ವಾಂಸರೆಲ್ಲಿ?’

‘ನಾರಿಗೇಕೆ ಅಯ್ಯಪ್ಪ ದೇಗುಲ ದಾರಿ’ ಎಂಬ ಕಾದಂಬರಿ ಬರೆಯುತ್ತಿರುವುದರಿಂದ ಅವರ ಬರೋಣವಾಗಿಲ್ಲ ದೇವಿ’.

‘ಅಯ್ಯಪ್ಪನೇ ನನ್ನನ್ನು ಪೂಜಿಸಿ ಬೀಳ್ಕೊಟ್ಟನಲ್ಲ.‌ ಅಲ್ಲಿ ವಿದ್ವಾಂಸರು ಕಾಣಲೇ ಇಲ್ಲ’ ಎಂದ ದುರ್ಗೆ, ಮುಂದುವರಿದು ಕೇಳಿದಳು.

‘ಎಲ್ಲಿ ಮಹಿಷಾಸುರ ಕಾಣುತ್ತಿಲ್ಲ. ನನ್ನನ್ನು ನಿಂದಿಸಲು ಈ ವೇಳೆಗಾಗಲೇ ಅವನು ಬರಬೇಕಿತ್ತಲ್ಲವೇ?’

‘ಆ ಅಸುರ ಬರುತ್ತಿದ್ದ ದೇವಿ. ಆದರೆ, ಕೆಲವು ‘ಮಹಿಷ’ಗಳು ಅವನನ್ನು ತಡೆದವು. ಅವನಿಂದ ನಿಮಗೆ ಅವಮಾನವಾಗುತ್ತದಂತೆ’.

‘ಅಯ್ಯೋ, ನಿಮಗೆಲ್ಲ ಏನಾಗಿದೆ? ಮಹಿಷಾಸುರ ಇರದಿದ್ದರೆ ನಾನು ಚಾಮುಂಡಿಯ ಅವತಾರವನ್ನೇ ಎತ್ತಲು ಸಾಧ್ಯವಾಗುತ್ತಿರಲಿಲ್ಲ ಅಲ್ಲವೇ’ ಪ್ರಶ್ನಿಸಿದಳು ಜಗನ್ಮಾತೆ.

‘ಹೋಗಲಿ ಬಿಡಿ, ದೊರೆಯ ಟೀಕಾಕಾರರೂ ಕಾಣುತ್ತಿಲ್ಲವಲ್ಲ’.

‘ದೇವಿ, ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ’.

‘ಮತ್ತೆ, ನೀವೊಬ್ಬರೇ ಇಲ್ಲೇಕೆ ಇದ್ದೀರಿ ಖಜಾನಾಧಿಕಾರಿ?’

‘ಖಜಾನೆ ಖಾಲಿ ಆಗಿದೆ ದೇವಿ, ಬೇರೆ ಕೆಲಸವಿಲ್ಲ’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.