ADVERTISEMENT

ಹುಚ್ಚು ಮಂಗ್ಯಾಗಳು

ಡಾ.ಬಿ.ಎಲ್.ವೇಣು
Published 16 ಜನವರಿ 2019, 20:01 IST
Last Updated 16 ಜನವರಿ 2019, 20:01 IST
   

ವಿಧಾನಸೌಧದ ಬಳಿ ಇರೋ ಮಂಗ್ಯಾಗಳೆಲ್ಲಾ ತಮ್ಮ ಕುಲಬಾಂಧವರನ್ನು ಫ್ರೀಡಂ ಪಾರ್ಕ್‌ಗೆ ಕರೆಸಿಕೊಂಡವು. ‘ನಮ್ಮ ಸ್ವಾಭಿಮಾನಕ್ಕೆ ಇತ್ತೀಚೆಗೆ ರಾಜಕಾರಣಿಗಳಿಂದ ಧಕ್ಕೆ ಆಗುತ್ತಿದೆ. ವಿನಾಕಾರಣ ನಮ್ಮಗಳ ಹೆಸರೆತ್ತಿ ಅಪಮಾನಿಸುತ್ತಿದ್ದಾರೆ. ನಾವೆಲ್ಲಾ ಒಗ್ಗಟ್ಟಾಗಿ ರಾಜಕಾರಣಿಗಳ ಈ ನಡೆಗೆ ವಿರೋಧ ವ್ಯಕ್ತಪಡಿಸಬೇಕು...’ ಎಂದು ಡಿಸ್ಕಶನ್‍ನಲ್ಲಿ ತೊಡಗಿದವು.

‘ಗಾಂಧಿ ತಾತನೇ ಮೂರು ಗೊಂಬೆಗಳ್ನ ಮಾಡೆಲ್ ಆಗಿ ಇಕ್ಕಂಡು ನಮ್ಮನ್ನು ಗೌರವಿಸೋವಾಗ ತೆಗಳಲು ಇವರು ಯಾರು’ ಎಂದು ಒಂದು ಮಂಗ ಪ್ರಶ್ನಿಸಿತು.

‘ಶ್ರೀರಾಮ ವನವಾಸಿಯಾಗಿದ್ದಾಗ ಮೂರು ಕಾಸೂ ಅಪೇಕ್ಷಿಸದೆ ಆತನ ಪರವಾಗಿ ನಿಂತವರು ನಾವು. ಬೇಡಿದ್ದನ್ನು ನೀಡಬಲ್ಲ ಲಂಕಾಧೀಶನತ್ತ ಜಿಗಿದವರಲ್ಲ (ಪಕ್ಷಾಂತರಿಗಳಲ್ಲ). ಅದು ನಮಗಿರೋ ನಿಯತ್ತು. ನಮಗೆ ರಾಮನೇ ಹೈಕಮಾಂಡು. ಟೈಮ್ ಬಂದ್ರೆ ಹೈಕಮಾಂಡ್ಗೇ ಕಮ್ಯಾಂಡ್ ಮಾಡೋ ದುಷ್ಟರು ನೀವು’‌ ಎಂದು ಮತ್ತೊಂದು ಮಂಗ ಹೀಯಾಳಿಸಿತು.

ADVERTISEMENT

‘ಹಸಿವಾದಾಗ ನಾವು ಕದ್ದು ತಿಂಬೋದುಂಟು. ಆದರೆ ನಾಳೆಗಂತ ಕೂಡಿಡೋ ದುರಾಸೆ ನರಪ್ರಾಣಿಗಳಲ್ಲ’ ಎಂಬುದು ಮತ್ತೊಂದು ಕೋತಿಯ ವರಾತ.

‘ಜನಸಾಮಾನ್ಯರೂ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ‘ಮಂಗನಿಗೆ ಹೆಂಡ ಕುಡಿಸ್ದಂಗೆ’ ಅಂತ ಗಾದೆ ಮಾಡಿದ್ದಾರೆ. ನಗರ–ಪಟ್ಟಣಗಳಲ್ಲಿ ಬಾರ್‌ ಮುಂದೆ ನಮ್ಮವರು ಯಾರಾದರೊಬ್ಬರು ಕಾಣಿಸ್ತಾರಾ, ತೋರಿಸ್ಲಿ? ಅಲ್ಲಿ ತೂರಾಡುವವರೆಲ್ಲ ನರಮನುಷ್ಯರೇ’ ಎಂದು ಇನ್ನೊಂದು ಕೋತಿ ಗುರ್‌ ಅಂದಿತು.

ಪಕ್ಷದಿಂದ ಪಕ್ಷಕ್ಕೆ ಹಾರ್ತಾರೆ ಅಂತ ಶಾಸಕರನ್ನೆಲ್ಲ ಕರ್ಕೊಂಡು ಹೋಗಿ ಯಾವುದ್ಯಾವುದೋ ರೆಸಾರ್ಟ್‌ನಲ್ಲಿ ರಾಜಾತಿಥ್ಯ ಕೊಡ್ತಾರೆ. ಎಷ್ಟು ಚೆನ್ನಾಗಿ ಜಂಪ್‌ ಮಾಡೋ ನಮ್ಮನ್ನು ಯಾವತ್ತಾದರೂ ಒಂದು ರೆಸಾರ್ಟ್‌ಗೆ ಇವರು ಕರ್ಕೊಂಡು ಹೋಗಿದ್ದಾರಾ? ‘ಕೋತಿ ತಿಂದು ಮೇಕೆ ಮೂತಿಗೆ ಒರೆಸಿತು’ ಅಂತ ಗಾದೆ ಕಟ್ಟಿ ನಮ್ಮ ನಡುವೇನೆ ಜಗಳ ಹಚ್ತೀರಾ! ಇದನ್ನು ಹೀಗೇ ಬಿಡಬಾರದು ಎಂದು ಕರಿಯ ಮಂಗ ಹೇಳಿತು. ಈ ಬಗ್ಗೆ ಪ್ರಾಣಿ ದಯಾ ಸಂಘಕ್ಕೆ ದೂರು ಒಯ್ಯಲು ತೀರ್ಮಾನಿಸಲಾಯಿತು. ‘ಅಲ್ಲೂ ಮಂಗ್ಯಾ ನನ್ಮಕ್ಕಳೇ ಕೂತಿದ್ದರೆ ಏನ್ಮಾಡೋದು’ ಅಂತ ಹಿರಿಯ ಮಂಗ ಗೊಣಗಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.