ADVERTISEMENT

ನಿದ್ದೆಯಿಂದ ಎಬ್ಬಿಸಲೂ ಸಂಗೀತ ಥೆರಪಿ...

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 20:15 IST
Last Updated 17 ಡಿಸೆಂಬರ್ 2018, 20:15 IST
   

ಬೆಳಗಿನ ವಾಕ್‌ನಲ್ಲಿ ನಡುಗುತ್ತ ಹೆಜ್ಜೆ ಹಾಕುತ್ತಿದ್ದವನನ್ನು ಯಾರೋ ಕರೆದಂತಾಗಿ ಕತ್ತು ತಿರುಗಿಸಿದೆ.

ಮಂಗನ ಟೊಪ್ಪಿ, ಉಣ್ಣೆಯ ರಾತ್ರಿಯುಡುಗೆಯ ವ್ಯಕ್ತಿ ನಿಂತಿದ್ದ. ಹೆದರಿ, 'ಅಯ್ಯೋ ನನ್ನ ಬಳಿ ಏನೂ ಇಲ್ಲ. ಪರ್ಸು, ಮೊಬೈಲು ಇಟ್ಟುಕೊಳ್ಳೋಲ್ಲ ನನ್ನನ್ನು ಬಿಟ್ಟುಬಿಡಿ... ಪ್ಲೀಸ್‌’ ಅಂತ ಅಂಗಲಾಚಿದೆ.

'ಶ್... ನಾನು ಕಣೋ’ ಟೊಪ್ಪಿ ಹಿಂದಕ್ಕೆ ಸರಿಸಿದ.

ADVERTISEMENT

-ಛೆ, ಕಂಠಿ. ಇವನೂ ಹೆದರಿಸುವಂತಾದನೇ!

'ಏನಿದು ನಿನ್ನ ಅವಸ್ಥೆ ?'

‘ಆನ್ ಸೆಟ್ ಆಫ್ ಧನುರ್ಮಾಸ...’ ಹಲ್ಕಿರಿದ. ಮೊಮ್ಮೊಗನ ಕಾನ್ವೆಂಟ್ ಇಂಗ್ಲಿಷ್‌ ಇವನ ಕನ್ನಡಕ್ಕೂ ಲಗ್ಗೆ ಹಾಕಿದೆ.

'ಅದು ಸರಿ, ಬೆಳಿಗ್ಗೆ ಎದ್ದದ್ದಾದರೂ ಹೇಗೆ? ತೂಕಡಿಕೆ ರಾಜನಲ್ಲ?‘ ರೇಗಿಸಿದೆ.

'ನನ್ನ ಶ್ರೀಮತಿ, ವಾರದಿಂದ ಸಂಗೀತ ಪಾಠಕ್ಕೆ ಹೋಗ್ತಿದ್ದಾಳೆ... ಅಭ್ಯಾಸ ಮಾಡೋಕ್ಕೆ ಶುರು ಮಾಡಿದಳು, ನನ್ನ ನಿದ್ದೆಯೆಲ್ಲ ಹಾರಿಹೋಯಿತು... ಅಲ್ಲೇ ಇದ್ದರೆ ಅನಾಹುತ ಆದೀತು ಅಂತ ಎದ್ದು ಬಂದೆ...' ಆಕಳಿಸಿದ.

'ನಿಜ. ಸಂಗೀತಕ್ಕೆ ಆ ಶಕ್ತಿ ಇದೆ... ಪಿಟೀಲು, ಕೋಮಾದಿಂದಲೇ ಹೊರಕ್ಕೆ ತರಬಹುದಾದರೆ ಇನ್ನು ನಿನ್ನ ನಿದ್ದೆ ಏನು ಮಹಾ...'

'ಹಾಗಾದರೆ ತೂಕಡಿಸುತ್ತಿರೋ ಅಧಿಕಾರಿಗಳನ್ನು ಎಬ್ಬಿಸೋಕ್ಕೂ ಸ್ವರಗಳನ್ನು ಬಳಸಿಕೊಂಡರೆ ಹೇಗೆ?'

ಕಂಠಿಗೆ ಒಮ್ಮೊಮ್ಮೆ ಭಯಂಕರ ವಿಷಯಗಳು ಹೊಳೆಯುತ್ತವೆ!

'ವಾಟ್ ಆ್ಯನ್ ಐಡಿಯಾ ಕಂಠಿ... ವರ್ಷಾಂತ್ಯದ ಆವಿಷ್ಕಾರಕ್ಕೆ ಪ್ರಶಸ್ತಿ ನಿನಗೇ ದಕ್ಕಬೇಕು'.
ಮತ್ತೆ ಹಲ್ಕಿರಿದ.

'ಅದಕ್ಕೆ ಅಪಸ್ವರದ ಕೀರಲು ಸಾಕು. ಸುಶ್ರಾವ್ಯವಾಗಿ ಹಾಡಿದರೆ, ನಿಶ್ಶಬ್ದ ನಿದ್ದೆಯಿಂದ ಸಶಬ್ದ ನಿದ್ದೆಗೆ ಜಾರಿದರೆ... ಅಲ್ವೆ?'

ಕಂಠಿಗೆ ನಾನು ಹೇಳಿದ್ದು ಅರ್ಥವಾಗದೇ 'ಕಣ್ಮುಚ್ಚಿ ಥಿಂಕಿಂಗ್’ ಎಂಬ ನಿದ್ದೆ ಪೊಸಿಷನ್‌ಗೆ ಜಾರುವುದ ಕಂಡು ಹೌಹಾರಿ 'ಗೊರಕೆ ಕಣಯ್ಯಾ' ಎಂದೆ.

'ಓ, ಹಾಗಾದರೆ ನನ್ನ ಶ್ರೀಮತಿಯ ಸಂಗೀತಕ್ಕೆ ಸ್ಕೋಪ್ ಇದೆ ಅಂತೀಯಾ?'

'ಖಂಡಿತ, ಅಭ್ಯಾಸ ಮುಂದುವರಿಸಲಿ'.

'ರಸ್ತೆ ದಾಟಿದರೆ ದೇವಸ್ಥಾನ, ಬಿಸಿಬಿಸಿ ಪೊಂಗಲ್ ಪ್ರಸಾದ ಸಿಗುತ್ತೆ, ನಡಿ’ ಎಂದಾಗ, ದೂಸರಾ ಮಾತಾಡದೆ ಗೋಣಾಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.