ADVERTISEMENT

ಹೊಸ ಬಾಸ್‌ ಹೊಸಸ ಪಾರ್ಟಿ

ಕೆ.ವಿ.ರಾಜಲಕ್ಷ್ಮಿ
Published 31 ಜುಲೈ 2019, 19:46 IST
Last Updated 31 ಜುಲೈ 2019, 19:46 IST
   

ಬೆಳಗಿನ ವಾಕ್‌ನಲ್ಲಿ ಕಂಠಿ ಕಾಣದಾದಾಗ, ಕರೆ ಮಾಡಿದೆ, ‘ನಾನು ಭ್ರಷ್ಟ ಅಲ್ಲ ನನ್ನನ್ನು ನಂಬು ಪ್ಲೀಸ್’ ಕ್ಷೀಣ ದನಿ ಕಂಠಿಯದೇ, ಡೌಟ್ ಇಲ್ಲ. ಎಲ್ಲೋ ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾನೆ ಅನ್ನಿಸಿ ಅವನ ಮನೆ ಕಡೆಗೆ ಸವಾರಿ ಹೊರಟೆ.

ಬಾಗಿಲಲ್ಲಿ ಬಾಲ ಮುದುಡಿ ಮಲಗಿದ್ದ ಕುನ್ನಿಯನ್ನು ಕಂಡು, ಕಂಠಿಗೂ ಇದೇ ಸ್ಥಿತಿ ಬಂದಿರಬೇಕು ಎನ್ನಿಸಿತು.

‘ಸದ್ಯ ನೀವಾಗೇ ಬಂದಿರಲ್ಲ? ನನಗಂತೂ ವಾರದಿಂದ ಸಾಕಾಗಿ ಹೋಗಿದೆ. ವಿಚಿತ್ರವಾಗಿ ಆಡ್ತಿದ್ದಾರೆ, ಊಟ, ತಿಂಡಿ ಹಾಳಾಗಿ ಹೋಗಲಿ, ಕಾಫೀನೂ ಮುಟ್ಟಿಲ್ಲ? ನಿದ್ದೆ ಅನ್ನೋದೇ ಮರೆತು ಹೋಗಿದೆ. ಏನೇನೋ ಕನವರಿಸ್ತಿರ್ತಾರೆ, ಕೊನೆಗೆ ಮೆಂಟಲ್ ಆಸ್ಪತ್ರೆಗೆ ಸೇರಿಸೋಣವೇ ಅಂತ ಯೋಚನೆ ಮಾಡ್ತಿದ್ದೆ, ನೀವೂ ಬಂದ್ರಿ, ಒಟ್ಟಿಗೆ ಹೋದರಾಯ್ತು’ ಶ್ರೀಮತಿ ಬಡಬಡಿಸಿದರು.

ADVERTISEMENT

‘ಅಂದರೆ ನಾನು ಮೆಂಟಲ್ ಅಂತಲೇ?’ ಅಂದ ಹಾಲಿನ ದಿವಾನದಲ್ಲಿ ಟಿ.ವಿ ನೋಡುತ್ತಾ ಕುಳಿತಿದ್ದ ಕಂಠಿ.

ಛೆ, ಹಾಗೆ ಭಾವಿಸಲು ಸಾಧ್ಯವಿಲ್ಲ, ಅಮಾಯಕನಿಗೆ ಈ ಸ್ಥಿತಿಯೇ ಎನ್ನಿಸಿತು. ‘ಏನಾಯ್ತು?’ ಕೇಳಿದೆ.

‘ನೀನಾದರೂ ನನ್ನನ್ನು ನಂಬು. ನಾನು ವಿಶ್ವಾಸದ್ರೋಹ ಬಗೆದಿಲ್ಲ. ವಚನಭ್ರಷ್ಟ ಆಗಿಲ್ಲ...’

‘ಅದೆಲ್ಲ ಮುಗಿದ ಕಥೆ, ಇನ್ಯಾಕೆ?’

‘ನಾನು ಹೇಳಿದ್ದು ರಾಜಕೀಯದ್ದಲ್ಲ, ನನ್ನ ಬಾಸ್‌ಗೆ ಟ್ರಾನ್ಸ್‌ಫರ್‌ ಆದರೆ ನಾನೇ ಪಾರ್ಟಿ ಕೊಡಿಸ್ತೀನಿ ಅಂದಿದ್ದೆ’.

‘ಕೊಟ್ಟ ಮಾತು ತಪ್ಪಿದೆಯಾ? ದ್ರೋಹಿ ಅಂತ ಬೈದರಾ?’

‘ನಾನೇ ಪಾರ್ಟಿ ಅರೇಂಜ್ ಮಾಡಿದರೂ ಬಾಸ್ ಪೇ ಮಾಡಿದರು. ಹೀಗಾಗಿ ‘ಪಾರ್ಟಿ ನಿನ್ನ ವತಿಯಿಂದ ಇನ್ನೂ ಆಗಿಲ್ಲ’ ಅಂತ ಮಾನ ಹರಾಜ್ ಮಾಡ್ತಿದ್ದಾರೆ ಆಫೀಸಲ್ಲಿ’.

‘ಓಹ್! ಅವಕಾಶವಾದಿಗಳು ಇನ್ನೊಂದು ಪಾರ್ಟಿಗೆ ಸ್ಕೆಚ್ ಹಾಕ್ತಿದ್ದಾರೆ, ಡೋಂಟ್ ವರಿ ‘ಹೊಸ ಬಾಸ್, ಹೊಸ ಪಾರ್ಟಿ’ ಅಂತ ಹೊಸ ಸ್ಲೋಗನ್ ಹರಡು, ಹಳೆಯದು ಮರೆತುಹೋಗುತ್ತೆ. ಪಬ್ಲಿಕ್ ಮೆಮೊರಿ ಈಸ್ ವೆರಿ ಶಾರ್ಟ್ ಅಲ್ವೇ?’ ಎಂದು ಧೈರ್ಯ ತುಂಬಿದೆ.

ಕಂಠಿ ಮತ್ತೆ ಮೊದಲಿನಂತಾಗಿ ಆಕಳಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.