ADVERTISEMENT

ಹಳೆ ಕೇಸು, ಹೊಸ ತನಿಖೆ!

ಬಿ.ಎನ್.ಮಲ್ಲೇಶ್
Published 22 ಸೆಪ್ಟೆಂಬರ್ 2022, 17:32 IST
Last Updated 22 ಸೆಪ್ಟೆಂಬರ್ 2022, 17:32 IST
   

‘ಪಪ್ಪಾ ಎಲ್ಲಿದೀರಿ? ಒಂದು ಪ್ರಾಬ್ಲಂ ಆಗಿಬಿಟ್ಟಿದೆ...’

‘ಯಾಕಮ್ಮ ಏನಾಯ್ತು? ಅಳಿಯಂದ್ರು, ಮಕ್ಕಳು ಎಲ್ಲ ಆರಾಮಿದಾರೆ ತಾನೆ?’

‘ಎಲ್ಲ ಆರಾಮಿದಾರೆ ಪಪ್ಪ, ಆದ್ರೆ...’

ADVERTISEMENT

‘ಆದ್ರೆ ಏನು? ಅಳಿಯಂದ್ರು ಮೊನ್ನೆ ತಾನೇ ಪ್ರಮೋಶನ್ ಮೇಲೆ ಇನ್‌ಸ್ಪೆಕ್ಟರು ಆಗಿದಾರೆ, ಟ್ರಾನ್ಸ್‌ಫರ್ ಏನಾದ್ರೂ?’

‘ಅಯ್ಯೋ ಅದೆಲ್ಲ ಏನಿಲ್ಲಪ್ಪ, ಅವರ ಪೊಲೀಸ್ ಕೆಲ್ಸದ್ದೇ ಸಮಸ್ಯೆ...’

‘ಯಾಕಮ್ಮ, ಲೋಕಾಯುಕ್ತ, ಇನ್‌ಕಂ ಟ್ಯಾಕ್ಸ್ ರೇಡೇನಾದ್ರೂ...’

‘ಅಂಥದಕ್ಕೆಲ್ಲ ಸಿಕ್ಕಾಕೋತಾರಾ ಇವ್ರು? ಅದೆಲ್ಲ ಸೇಫಾಗಿ ಎಲ್ಲೆಲ್ಲಿರಬೇಕೋ ಅಲ್ಲಲ್ಲಿದೆ’.

‘ಮತ್ತೇನು? ಮೇಲಧಿಕಾರಿಗಳ ಕಿರುಕುಳನಾ? ಹಂಗೇನಾದ್ರೂ ಇದ್ರೆ ಹೇಳು, ಸರ್ಕಾರದಲ್ಲಿ ನಂಗೂ ಇನ್‌ಫ್ಲುಯೆನ್ಸ್ ಇದೆ, ಸರಿ ಮಾಡೋಣ’.

‘ಅದೇ... ಸರ್ಕಾರದ್ದೇ ಸಮಸ್ಯೆ. ನೀವು ಇವ್ರಿಗೆ ಸಬ್‌ಇನ್‌ಸ್ಪೆಕ್ಟರ್ ಕೆಲ್ಸ ಕೊಡ್ಸಿ ಹದಿನೈದು ವರ್ಷ ಆತು. ಈಗ ಸರ್ಕಾರದೋರು ಆವತ್ತಿನ ನೇಮಕಾತಿ ಬಗ್ಗೆ ತನಿಖೆ ಮಾಡಿಸ್ತಾರೆ ಅಂತ ಪೇಪರ್‌ನಲ್ಲಿ ಬಂದಿತ್ತು. ಅದ್ಕೆ ಇವರು ಟೆನ್ಷನ್ ಆಗಿಬಿಟ್ಟಿದಾರೆ’.

‘ಅಷ್ಟೇನಾ? ನನ್ನ ನಿವೃತ್ತಿಗೆ ಇನ್ನು ಎರಡು ವರ್ಷ ಐತೆ, ಈಗ ನಾನು ನೇಮಕ ಆದ ಕಾಲದಿಂದ್ಲೂ ತನಿಖೆ ಮಾಡಿಸ್ತೀನಿ ಅಂದ್ರೆ? ಅದಕ್ಕೆಲ್ಲ ಹೆದರ್ಕಂತಾರಾ? ನೀನೊಳ್ಳೆ’.

‘ಅಲ್ಲಪ್ಪಾ... ಇವ್ರು ಫಿಜಿಕಲ್ ಟೆಸ್ಟು, ರಿಟನ್ ಟೆಸ್ಟು ಯಾವುದೂ ಪಾಸಾಗಿರ್ಲಿಲ್ಲ. ನೀವು ಅದೆಲ್ಲ ಸರಿ ಮಾಡ್ಸಿ ಯಾರ್‍ಯಾರಿಗೆ ಏನೇನ್ ಕೊಡ್ಬೇಕೋ ಕೊಟ್ಟು ಸಬ್‌ಇನ್‌ಸ್ಪೆಕ್ಟರ್ ಕೆಲ್ಸ ಕೊಡ್ಸಿದ್ರಿ. ಈಗ ಅದೆಲ್ಲ ಬಯಲಿಗೆ ಬಂದ್ರೆ?’

‘ಅಲ್ಲಮ್ಮ, ಕೊಟ್ಟೋರು ನಾವಾದ್ರೂ ಇಸ್ಕಂಡೋರು ಸಿಗಬೇಕಲ್ಲ’.

‘ಯಾಕೆ? ಸಿಗಲ್ಲಾಂತೀರ?’

‘ಸಿಗಬಹುದು, ಅವರನ್ನ ಹಿಡೀಬೇಕಂದ್ರೆ ಸಿಐಡಿಯೋರು ಯಮಲೋಕಕ್ಕೆ ಹೋಗ ಬೇಕಾಗುತ್ತೆ’.

‘ಯಾಕೆ?’

‘ಯಾಕಂದ್ರೆ ನಮ್ಮತ್ರ ದುಡ್ಡಿಸ್ಕಂಡೋರು ಈಗ ಅಲ್ಲೇ ಇರೋದು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.