ADVERTISEMENT

ಚುರುಮುರಿ | ರಾಜಕೀಯ ‘ಮಾತು’! 

ಗುರು ಪಿ.ಎಸ್‌
Published 23 ಜುಲೈ 2025, 23:30 IST
Last Updated 23 ಜುಲೈ 2025, 23:30 IST
   

‘ಒಂದೇ ತಿಂಗಳು, ಇನ್ನೊಂದೇ ಒಂದು ತಿಂಗಳು…’ ಅವಸರದಲ್ಲಿ ಸರ ಸರ ಅಂತ ಓಡಾಡುತ್ತಿದ್ದ ಮುದ್ದಣ್ಣ. 

‘ಏನಾಯ್ತು‌ ನಿಂಗೆ?’ ಆರಾಮ್ ಚೇರ್‌ನಲ್ಲಿ ಅರ್ಧ ಮಲಗಿಕೊಂಡೇ ಕೇಳಿದರು ಸಾಹೇಬ್ರು. 

‘ಅದೇ ಸರ್, ನಿಮ್ ಬರ್ತ್ ಡೇಗೆ ಇನ್ನೊಂದೇ ತಿಂಗಳಿದೆಯಲ್ವ, ಅದು ನಿಮ್ಮ ಜೀವನದ ಅಮೃತ ಮಹೋತ್ಸವ ವರ್ಷ ಆಗುತ್ತಲ್ವ’.

ADVERTISEMENT

‘ಅಮೃತ ಮಹೋತ್ಸವ ವರ್ಷವಾ?’

‘ಅದೇ ಸರ್, ಮುಂದಿನ ತಿಂಗಳು ನಿಮಗೆ 75 ಆಗುತ್ತಲ್ವ’ 

75 ವರ್ಷ ಅನ್ನೋ ಪದ ಕಿವಿಗೆ ಬೀಳುತ್ತಲೇ ಸಾಹೇಬರ ಮುಖ ಕಪ್ಪಿಟ್ಟಿತು. ‘75 ಆಗೇ ಬಿಡ್ತಾ’ ಎನ್ನುತ್ತ ಆರಾಮ್ ಚೇರ್‌ನಿಂದ ಮೇಲೆದ್ದರು. 

‘ಹೂಂ ಸರ್, ಬರ್ತ್ ಡೇ ಯಾವ ರೀತಿ ಇರಬೇಕು ಅಂತ ಎಲ್ಲ ಪ್ಲ್ಯಾನ್ ಮಾಡಿಟ್ಟಿದ್ದೀನಿ ಸರ್’.

‘ಸಾಕ್ ಸುಮ್ನಿರಯ್ಯ, ಈಗಾಗಲೇ ನಮ್ ಪಾರ್ಟಿಯವರು ಏನೇನ್ ಪ್ಲ್ಯಾನ್ ಮಾಡಿಟ್ಟಿದ್ದಾರೋ ಅನ್ನೋ ಟೆನ್ಷನ್ ನನಗೆ’.

‘ಯಾಕ್ ಸರ್ ಟೆನ್ಷನ್ನು?’ 

‘ಇಲ್ಲದೇ ಇರುತ್ತೇನಯ್ಯ, 75ಕ್ಕೆ ರಾಜಕೀಯ ನಿವೃತ್ತಿ ತಗೋಬೇಕು ಅನ್ನೋ ರೂಲ್ಸ್ ನಮ್ ಪಕ್ಷದಲ್ಲಿರೋದು ನಿನಗೆ ಗೊತ್ತಿಲ್ವೇನು?’ 

‘ಓಹೋ... ಹಾಗಾದರೆ ಮುಂದಿನ ತಿಂಗಳು ನೀವೂ ಮಾರ್ಗದರ್ಶಕ ಮಂಡಳಿ ಸೇರ್ತೀರಿ…’ ಎಂದು ಹೇಳುತ್ತಿದ್ದಂತೆ ಅವನ ಬಾಯಿ ಮುಚ್ಚಿಸಿದ ಸಾಹೇಬ್ರು, ‘ಅಪಶಕುನ ಎಲ್ಲ ನುಡಿಬೇಡ ನೀನು’
ಎಂದು ಗದರಿದರು. 

‘ನಾನು ನುಡೀಲಿಲ್ಲ ಅಂದ್ರೂ, ಅಪೋಸಿಷನ್ ಪಾರ್ಟಿಯವರಾದರೂ ಶುರು ಹಚ್ಕೊತಾರಲ್ವ ಸರ್?’ 

‘ಅವರೇನ್ ಶುರು ಹಚ್ಕೊತಾರೆ, ನಮ್ಮದರಲ್ಲಾದರೆ 75 ವರ್ಷಕ್ಕೆ ನಿವೃತ್ತಿ ಬಗ್ಗೆ ಯೋಚನೆಯಾದರೂ ಇದೆ, ಆದರೆ ಅವರಲ್ಲಿ ರಾಜಕೀಯ ಭವಿಷ್ಯ ಇರೋದೇ 75ರ ನಂತರದವರಿಗೆ’ ನೋವಲ್ಲೂ ನಗುತ್ತಾ ಹೇಳಿದರು ಸಾಹೇಬ್ರು‌. 

‘ಆದ್ರೂ ಅವರು ಮತ್ತೆ ಮತ್ತೆ 75 ವರ್ಷದ ವಿಷಯ ಪ್ರಸ್ತಾಪ ಮಾಡಿದ್ರೆ ಏನ್ ಮಾಡ್ತೀರಿ ಸರ್?’

‘ನಾನು, ಎರಡೂವರೆ ವರ್ಷ ಆಯ್ತು ಅಂತೀನಷ್ಟೇ’ ಕಣ್ಣು ಮಿಟುಕಿಸಿದರು ಸಾಹೇಬ್ರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.