ADVERTISEMENT

ಚುರುಮುರಿ| ಅಡ್ಡಬಿದ್ದೆ ಅಣ್ತಮ್ಮ

ಲಿಂಗರಾಜು ಡಿ.ಎಸ್
Published 24 ಫೆಬ್ರುವರಿ 2020, 19:25 IST
Last Updated 24 ಫೆಬ್ರುವರಿ 2020, 19:25 IST
ಚುರುಮುರಿ
ಚುರುಮುರಿ   

‘ಸಾ, ಟ್ರಂಪಣ್ಣ ಬಂದದಲ್ಲಾ, ಅಣ್ಣನಿಗೆ ಮೋದಿ ವೆಜಿಟೇರಿಯನ್ನು ಊಟ ಕೊಡ್ತರೇನೋ?’ ಅಂದೆ.

‘ನನಗೆ ವಯಿಸಿದ್ರೆ ಟ್ರಂಪಣ್ಣನಿಗೆ ಮಂಡ್ಯದ ಬಾಡೂಟವೇ ಕೊಡ್ತಿದ್ದೆ ಕನೋ!’ ಅಂದ್ರು. ‘ನಿಮ್ಮ ಮಾರೀಪತ್ತಲ್ಲಿ ಊಟದ ವೈಭೋಗ ಯಂಗೆ?’ ಅಂತ ಕೇಳಿದೆ.

‘ನೋಡ್ಲಾ, ಬೆಳಿಗ್ಗೆ ಎದ್ದೇಟಿಗೆ ನಂಜನಗೂಡು ಹಲ್ಲುಪುಡೀಲಿ ಹಲ್ಲು ತಿಕ್ಕಿಸಿ, ರಾಗಿ ಅಂಬಲಿ– ಮಜ್ಜಿಗೆ ಕುಡಿಯಕೆ ಕೊಡತೀನಿ’ ಅಂದ್ರು. ‘ಆಮೇಲೆ?’ ಅಂತ ಪ್ರೋತ್ಸಾಹಿಸಿದೆ.

ADVERTISEMENT

‘ನೀರುಯ್ಕಂಡು ಬಂದಾಗ ಕಾಲು ಸೂಪು, ತಟ್ಟೆಇಡ್ಲಿ, ತಿಂಡಿಗೆ ಅಕ್ಕಿರೊಟ್ಟಿ, ಹುಚ್ಚೆಳ್ಳು ಚಟ್ನಿ, ಸೆಟ್ಟುದೋಸೆ, ಮದ್ದೂರು ವಡೆ, ಮೈಸೂರು ಕಾಪಿ, ಚಿಂತಾಮಣಿ ಚಾಟ್ಸು’ ತುರೇಮಣೆ ಮುಂದುವರಿಸಿದರು.

‘ಮದ್ಯಾನಕ್ಕೆ ರಾಗಿಮುದ್ದೆ, ನಾಟಿ ಕೋಳಿಸಾರು, ಅಕ್ಕಿ ರೊಟ್ಟಿ, ಸಣ್ಣಕ್ಕಿ ಅನ್ನ, ಮಂಗಳೂರು ಕಾಣೆ ಫ್ರೈ, ಅಂಜಲ್ ಮಸಾಲ, ನೀರುದೋಸೆ, ಕುಡಿಯಕ್ಕೆ ಮಸಾಲಮಜ್ಜಿಗೆ’ ಅಂದ್ರು. ನನಗೆ ಬಾಯಲ್ಲಿ ಲಾಲಾರಸ ಕಡೆಯಲಾರಂಭಿಸಿತ್ತು. ‘ಆಮೇಲ್ಸಾ?’ ಅಂತ ಕೇಳಿದೆ.

‘ಟ್ರಂಪಣ್ಣಂಗೆ ಮೈಸೂರು ಪೇಟ ಇಕ್ಕಿ ಸನ್ಮಾನ. ಅವರೆಂಡ್ರು ಮೆಲ್ಲಮ್ಮಯ್ಯ, ಮಗಳು ಈವಕ್ಕಂಗೆ ಮೈಸೂರು ಸಿಲ್ಕು ಸೀರೆ ಬಾಗಿನ ಮಡಿಲಕ್ಕಿ ಉಯ್ಯಬೇಕು! ಸಂದೇಗೆ ತಿಂಡಿಗೆ ಮೈಸೂರು ಪಾಕು, ಮಸಾಲೆ ದೋಸೆ, ಗಿರ್ಮಿಟ್, ಮಿರ್ಚಿಮಂಡಕ್ಕಿ ಖಾರ, ಕಾಪಿ. ಈಗ ರಾತ್ರಿ ಊಟದ್ದೂ ಕೇಳು’ ಅಂದ್ರು. ನನಗೆ ಕೇಳಿಸಿಕಳದು ಬುಟ್ರೆ ಬೇರೆ ದಾರಿ ಇರಲಿಲ್ಲ.

‘ರಾತ್ರಿಗೆ ಬನ್ನೂರು ಕುರಿ ಬಿರಿಯಾನಿ, ತಲೆ ಮಾಂಸ, ಮಳವಳ್ಳಿ ಕೆರೆ ಹಾವುಬತ್ತಿ ಮೀನು
ಸಾರು, ಮುದ್ದೆ, ಬೋಟಿ ಪಲ್ಯ, ಕೈಮಾ ಗೊಜ್ಜು, ಮಟನ್ ಫ್ರೈ ಸಾಕಲ್ವಲಾ?’ ಅಂತ ವಿವರ ಕೊಟ್ರು.

‘ಅಲ್ಲಾ ಸಾ, ಇಷ್ಟೆಲ್ಲಾ ಜಾಸ್ತಿಯಾಗಲಿಲ್ಲವಾ?’ ಬಾಯಲ್ಲಿ ಜೊಲ್ಲು ತುಂಬಿಕೊಂಡು ಕೇಳಿದೆ.

‘ಬೇಕು ಕನೋ. ಊಟದ ಐಬೋಗ ಕಂಡು ಮೋದಿಗೆ ‘ಅಡ್ಡಬಿದ್ದೆ ಅಣ್ತಮ್ಮಾ’ ಅಂತ ಟ್ರಂಪಣ್ಣ ಏಳದಿದ್ರೆ ಕೇಳ್ಲಾ. ಚಾಲಾಕಿ ಮೋದಿ ಊಟದಲ್ಲೇ ಚಿತ್ತು ಮಾಡ್ತರೆ!’ ಅಂದ್ರು. ನಾನು ಕೋವಿಡ್‌ ವೈರಸ್ಸಾಗಿರಾ ನಾಟಿಕೋಳಿ ಥರಾ ಗುಮ್ಮಗೆ ಕುಂತುದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.