
‘ಏನ್ರಲೆ ಹೊಸ ಸುದ್ದಿ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
‘ಹೊಸ ಸುದ್ದೀನಾ? ಗುಂಡು, ಗೋಲ್ಡ್ ರೇಟಲ್ಲಿ ಭಾರೀ ಕಡಿತ...’ ಎಂದ ಗುಡ್ಡೆ.
‘ಗೊತ್ತಾತು, ನಿಂಗೆ ರಾತ್ರಿದಿನ್ನೂ ಇಳಿದಿಲ್ಲ...’ ಮಂಜಮ್ಮ ನಕ್ಕಳು.
‘ನಿನ್ತೆಲಿ, ನೆಟ್ಟಗೆ ಪೇಪರ್ ಓದೋದು ಕಲಿ. ‘ಮದರ್ ಆಫ್ ಡೀಲ್ಸ್’ನಿಂದಾಗಿ ಮದ್ಯ, ಆಭರಣಗಳಿಗೆ ಟ್ಯಾಕ್ಸ್ ಕಮ್ಮಿ ಆಗ್ತಾವು, ರೇಟೂ ಇಳೀತತಿ...’ ಗುಡ್ಡೆ ವಿವರಿಸಿದ.
‘ಓ... ಹೌದಾ? ಇದು ಗೊತ್ತಿದ್ದಿಲ್ಲ... ಅದಿರ್ಲಿ, ‘ನಮ್ ಮದರ್ ಆಫ್ ಡೀಲ್ಸ್’ ಏನಂತತಿ?’ ಕೊಟ್ರೇಶಿ ಕೊಕ್ಕೆ.
‘ನಮ್ ಮದರ‍್ರಾ? ಅಂದ್ರೆ?’
‘ನಮ್ ನಿರ್ಮಲಾ ಸೀತಾರಾಂ ಕಣಲೆ! ನಾಳೆನೋ ನಾಡಿದ್ದೋ ಅವರು ಮಂಡಿಸೋ ಕೇಂದ್ರ ಬಜೆಟ್ ಏನಂತತಿ ಅಂದೆ...’
‘ಓ... ಅದಾ, ಕಾಂಗ್ರೆಸ್‌ನೋರ ಪ್ರಕಾರ ನಿರಾಶಾದಾಯಕ, ನೀರಸ, ಖಾಲಿ ಡಬ್ಬಾ, ಕರ್ನಾಟಕಕ್ಕೆ ಚೊಂಬು, ಕುರ್ಚಿ ಉಳಿಸಿಕೊಳ್ಳೋ ಬಜೆಟ್...’
‘ಮತ್ತೆ ಬಿಜೆಪಿಯೋರ ಪ್ರಕಾರ?’
‘ಸರ್ವಸ್ಪರ್ಶಿ, ಐತಿಹಾಸಿಕ ಬಜೆಟ್... ಜನಪರ, ರೈತಪರ, ದೂರದೃಷ್ಟಿ ಬಜೆಟ್...’
‘ಅಲ್ಲೋ ಗುಡ್ಡೆ, ಇನ್ನೂ ಬಜೆಟ್ ಮಂಡನೇನೆ ಆಗಿಲ್ಲ, ಆಗ್ಲೇ ಯಾರ್‍ಯಾರು ಏನೇನಂತಾರೆ ಅಂತ ತೆಲಿ ಮ್ಯಾಲ ಹೊಡೆದಂಗೆ ಹೇಳ್ತೀಯಲ್ಲೋ...’ ಮಂಜಮ್ಮಗೆ ನಗು ಬಂತು.
‘ಬೇಕಾದ್ರೆ ನೋಡ್ತಿರು, ಬಜೆಟ್ ಮಂಡನೆ ಆದಮೇಲೆ ಎಲ್ರೂ ಹಿಂಗೇ ಹೇಳೋದು... ಎಂಥಾ ಒಳ್ಳೇ ಬಜೆಟ್ ಕೊಟ್ರೂ ಕಾಂಗ್ರೆಸ್‌ನೋರು ಅದನ್ನ ಡಬ್ಬಾ ಅಂತಾರೆ. ಡಬ್ಬಾ ಬಜೆಟ್ ಮಂಡಿಸಿದ್ರೂ ಬಿಜೆಪಿಯೋರು ಅದನ್ನ ಅದ್ಭುತ, ಐತಿಹಾಸಿಕ ಅಂತಾರೆ...’
‘ಆಯ್ತಪ್ಪ, ಈಗ ನಿನ್ ಪ್ರಕಾರ ಒಳ್ಳೇ ಬಜೆಟ್ ಅಂದ್ರೆ ಯಾವುದು?’ ತೆಪರೇಸಿ ಕೇಳಿದ.
‘ಒಳ್ಳೇ ಬಜೆಟ್ ಅಂದ್ರೆ ನಿರ್ಮಲಮ್ಮನ ಬಜೆಟ್‌ನ ರಾಹುಲ್ ಗಾಂಧಿ ಹೊಗಳಬೇಕು, ಸಿದ್ರಾಮಣ್ಣನ ಬಜೆಟ್‌ನ ಯಡ್ಯೂರಪ್ಪ, ಅಶೋಕಣ್ಣ ಮೆಚ್ಕಾಬೇಕು...’
‘ಅದು ಈ ಜನ್ಮದಲ್ಲಿ ಸಾಧ್ಯ ಇಲ್ಲ ಬಿಡು’ ಎಂದ ದುಬ್ಬೀರ. ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.