ADVERTISEMENT

ಚುರುಮುರಿ | ಮ್ಯಾಜಿಕ್ ಬಟನ್!

ಬಿ.ಎನ್.ಮಲ್ಲೇಶ್
Published 25 ಜನವರಿ 2024, 19:30 IST
Last Updated 25 ಜನವರಿ 2024, 19:30 IST
.
.   

‘ಗುಡ್ಡೆ ಪೇಪರ್ ನೋಡಿದ್ಯಾ? ಪಿರಿಯಾಪಟ್ಣದಲ್ಲಿ ಸ್ವತಃ ಸಿಎಂ ಬಟನ್ ಒತ್ತಿದ್ರೂ ನೀರೆತ್ತೋ ಮೋಟ್ರು ಆನ್ ಆಗ್ಲಿಲ್ಲಂತೆ, ಅದ್ಕೆ ಅದ್ಯಾರೋ ಆಫೀಸರ್‌ನ ಸಸ್ಪೆಂಡ್ ಮಾಡಿದಾರೆ...’ ದುಬ್ಬೀರ ಗುಡ್ಡೆಗೆ ಪೇಪರ್ ತೋರಿಸಿ ಹೇಳಿದ.

‘ಅದಿರ್‍ಲಿ, ಇಲ್ಲಿ ನಿಗಮ, ಮಂಡಳಿಗೆ ಸಿಎಮ್ಮು, ಡೀಸಿಎಮ್ಮು ಸೇರೇ ಬಟನ್ ಒತ್ತಿದ್ರಪ, ಅದು ಆನ್ ಆಯ್ತಾ? ಒರಿಜಿನಲ್ ಬಟನ್ ಇರೋದು ಕೈಕಮಾಂಡ್ ಹತ್ರ’ ಗುಡ್ಡೆ ನಕ್ಕ.

‘ಅದು ಆನ್ ಆಗದಂಗೆ ಕೆಲವ್ರು ಫಿಟ್ಟಿಂಗ್ ಇಟ್ಟಿರ್ತಾರೆ ಕಣ್ರಲೆ, ಮೋಟ್ರು ಫಿಟ್ಟಿಂಗ್ ಎಲ್ಲಿ ತಪ್ಪಿದೆ ಹುಡುಕಬೋದು, ಈ ರಾಜಕೀಯದ ಫಿಟ್ಟಿಂಗ್ ಹುಡುಕೋದು ಕಷ್ಟ’ ತೆಪರೇಸಿ ಅನುಭವದ ಮಾತಾಡಿದ.

ADVERTISEMENT

‘ನೋಡ್ರಪ ಯಾರ್‍ಯಾರ ಬಟನ್ ಎಲ್ಲೆಲ್ಲಿರ್ತಾವೆ ಹೇಳೋದು ಕಷ್ಟ. ಈಗ ರಾಜ್ಯದ ಕಮಲಕ್ಕನ ಬಟನ್ನು ತೆನೆಯಕ್ಕನತ್ರ ಐತಂತೆ ಗೊತ್ತಾ?’ ಮಂಜಮ್ಮ ನಕ್ಕಳು.

‘ಮಂಜಮ್ಮ ಸುಮ್ನೆ ಗೊತ್ತಿಲ್ದೆ ಮಾತಾಡ್ಬೇಡ, ಕಮಲಕ್ಕನ ಬಟನ್ನು ಸ್ವಲ್ಪ ಸ್ಟ್ರಕ್ ಆಗಿತ್ತಂತೆ, ರಿಪೇರಿಗೆ ತೆನೆಯಕ್ಕನತ್ರ ಕೊಟ್ಟಿದಾರೆ ಅಷ್ಟೆ’ ಕೊಟ್ರೇಶಿಗೆ ಸಿಟ್ಟು ಬಂತು.

‘ಕರೆಕ್ಟ್, ಈಗ ಕೈಯಪ್ಪನ ಮನೇಲಿ ಮೂವರು ಡಿಸಿಎಂ ಬೇಕು ಅಂತ ಒಬ್ರು ರೊಳ್ಳಿ ತೆಗೆದಿದ್ರಲ್ಲ, ಅವರ ಬಟನ್ ಎಲ್ಲಿದೆ ಅಂತ ನಿಮಗೇನರೆ ಗೊತ್ತಾ?’ ಕೊಟ್ರೇಶಿ ಪರ ತೆಪರೇಸಿ ವಾದಿಸಿದ.

‘ಆತು ಆತು... ಜಗಳ ಬ್ಯಾಡ, ಈ ಬಟನ್‌ಗಳು ಎಲ್ಲೋ ಯಾರೋ ಒತ್ತಿದ್ರೆ ಮ್ಯಾಜಿಕ್ ತರ ಇನ್ನೆಲ್ಲೋ ಆನ್ ಆಗಿರ್ತವು. ಕೆಲವು ಸಲ ಎಷ್ಟು ಒತ್ತಿದ್ರೂ ಆನೇ ಆಗಲ್ಲ’ ದುಬ್ಬೀರ ಸಮಾಧಾನಪಡಿಸಿದ.

ಅಷ್ಟರಲ್ಲಿ ದುಬ್ಬೀರನ ಮೊಬೈಲ್ ರಿಂಗಾಯಿತು. ದುಬ್ಬೀರ ಧಡಕ್ಕನೆ ಎದ್ದು ‘ಒಂದ್ನಿಮಿಷ ಬಂದೆ, ಹಲೋ...’ ಎನ್ನುತ್ತ ಆಚೆ ಹೋದ.

ಗುಡ್ಡೆಗೆ ನಗು. ‘ಇದು ಯಾರ ಬಟನ್ ಗೊತ್ತಾ? ಅವನೆಂಡ್ತಿದು... ಅಲ್ಲಿ ಫೋನ್ ಬಟನ್ ಒತ್ತಿದ್ರೆ ಇಲ್ಲಿ ಇವ್ನು ಹೆಂಗ್ ಎದ್ದು ಓಡೋದ ನೋಡಿ’ ಎಂದ. ಎಲ್ಲರೂ ಸದ್ದು ಕೇಳಿಸದ ಹಾಗೆ ಕಿಸಕ್ಕೆಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.