ADVERTISEMENT

ಚುರುಮುರಿ ಕ್ಷೇತ್ರ ರಿಪೇರಿ

ಮಣ್ಣೆ ರಾಜು
Published 13 ಡಿಸೆಂಬರ್ 2022, 19:30 IST
Last Updated 13 ಡಿಸೆಂಬರ್ 2022, 19:30 IST
.
.   

‘ಮ್ಯಾಂಡಸ್ ಚಂಡಮಾರುತದ ಚಳಿಗೇ ನಡುಗುವ ನೀವು ಚಳಿಗಾಲದ ಅಧಿವೇಶನದಲ್ಲಿ ಅದೆಷ್ಟು ನಡುಗುವಿರೋ...’ ಶಾಸಕರಿಗೆ ಕಾಫಿ ತಂದುಕೊಟ್ಟ ಪತ್ನಿ, ‘ಮರೆಯದೇ ಅಧಿವೇಶನಕ್ಕೆ ಶಾಲು, ಸ್ವೆಟರ್, ಕೋಟು ತಗೊಂಡು ಹೋಗಿ’ ಎಂದರು.

‘ಅಗತ್ಯವಿಲ್ಲ, ಸದನದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತದೆ. ಆಡಳಿತ ಪಕ್ಷ- ವಿರೋಧ ಪಕ್ಷದವರು ಪರಸ್ಪರ ಚಳಿ ಬಿಡಿಸಲು ಸಜ್ಜಾಗಿದ್ದಾರೆ’ ಎಂದರು ಶಾಸಕರು.

‘ಜಡಿಮಳೆಗೆ ಕಂಗಾಲಾಗಿದ್ದೇವೆ, ಶಾಸಕರು ಬಂದು ನಮ್ಮ ಕಷ್ಟ ಕೇಳಲಿಲ್ಲ ಎಂದು ಚಟ್ನಿಹಳ್ಳಿ ಜನ ಮನೆಗೆ ಬಂದು ಕಷ್ಟ ಹೇಳಿಕೊಂಡರು’.

ADVERTISEMENT

‘ನಾನು ಹೋಗಿ ಅವರಿಗೆ ಛತ್ರಿ ಹಿಡಿಯಬೇಕಾಗಿತ್ತಂತಾ...’ ಶಾಸಕರಿಗೆ ಸಿಟ್ಟು.

‘ಎಲೆಕ್ಷನ್ ಬರುತ್ತಿರುವುದರಿಂದ ಛತ್ರಿ ಹಿಡಿಯಲೇಬೇಕೂರೀ. ಈ ಬಾರಿ ನೀವು ಸೋಲುವಿರಿ ಅಂತ ಕ್ಷೇತ್ರದ ಆಂತರಿಕ ಸಮೀಕ್ಷಾ ವರದಿ ಹೇಳಿದೆ...’

‘ಈ ಕ್ಷೇತ್ರ ಬಿಟ್ಟು ಸುರಕ್ಷಿತ ಕ್ಷೇತ್ರ ಹುಡುಕುತ್ತಿದ್ದೇನೆ...’

‘ನಿವೇಶನ ಖರೀದಿಸಿ ಮನೆ ಕಟ್ಟುವ ಬದಲು ಇರುವ ಮನೆಯ ಡ್ಯಾಮೇಜ್ ರಿಪೇರಿ ಮಾಡಿಕೊಳ್ಳುವುದು ಜಾಣತನ. ಕಾರ್ಯಕರ್ತರು ಪರಪಕ್ಷದ ಪಾಲಾಗದಂತೆ ಅವರ ಬೇಕುಬೇಡಗಳನ್ನು ಪೂರೈಸಿರಿ, ಮತದಾರರ ಮನ ಗೆಲ್ಲಿರಿ’.

‘ಎದುರು ಪಕ್ಷದ ಅಭ್ಯರ್ಥಿ ಮನೆಗೊಂದು ಕುಕ್ಕರ್ ಕೊಟ್ಟಿದ್ದಾನೆ. ಕುಕ್ಕರ್‌ಗಳ ವಿಶಲ್‌ಗಳು ಅವನ ಪರ ಕೂಗುತ್ತಿವೆ. ನನ್ನ ಕೂಗು ಯಾರಿಗೂ ಕೇಳಿಸುತ್ತಿಲ್ಲ...’

‘ಪ್ರತಿಪಕ್ಷದವರು ವೆಲ್ತ್ ಕ್ಯಾಂಪ್ ಮಾಡಿ ದುಡ್ಡು ವಿತರಣೆ ಮಾಡ್ತಿದ್ದಾರಂತೆ, ನೀವಿನ್ನೂ ಹೆಲ್ತ್ ಕ್ಯಾಂಪ್, ರಕ್ತದಾನ ಶಿಬಿರದಲ್ಲೇ ಇದ್ದೀರಿ, ಜನರ ಅಭಿರುಚಿಗೆ ತಕ್ಕಂತೆ ಅಪ್‍ಡೇಟ್ ಆಗಬೇಕು’.

ಶಾಸಕರು ನಿಟ್ಟುಸಿರುಬಿಟ್ಟರು.

‘ನೀವು ಆಡುವ ಲ್ಯಾಂಗ್ವೇಜ್, ಬಾಡಿ ಲ್ಯಾಂಗ್ವೇಜ್ ಸರಿಯಿಲ್ಲವಂತೆ. ಈ ಎರಡೂ ಲ್ಯಾಂಗ್ವೇಜ್‍ಗಳನ್ನು ರಿಪೇರಿ ಮಾಡಿಕೊಂಡು ನಾಲಿಗೆ ಕೋಪ, ರೌಡಿ ರೂಪಕ್ಕೆ ಕಡಿವಾಣ ಹಾಕಿ ಕೊಳ್ಳಿ...’ ಶಾಸಕರಿಗೆ ಸಲಹೆ ನೀಡಿದರು ಪತ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.