
‘ನಮ್ಮ ಕಾಲದ ರಾಜಕಾರಣಿಗಳು ದೀಪದಿಂದ ದೀಪ ಹಚ್ಚಿರಿ ಅಂತ ಹೇಳಿ ಹೊಂಟೋದ ಮ್ಯಾಲೆ ಈವತ್ಲ ಜನನಾಯಕರು ದೀಪ ಇರೋದೇ ಬೆಂಕಿ ಹಚ್ಚಕ್ಕೆ ಅಂತ ದ್ವೇಷದ ಬೆಂಕಿ ಹಾಕಿ ಮೈಕಾಯಿಸ್ಕತಾವ್ರೆ’ ಯಂಟಪ್ಪಣ್ಣ ಬೇಜಾರು ತೋರಿಸಿತು.
‘ಇದೇನು ಕಂಡಿಯೇ, ರಾಜ್ಯಪಾಲರ ಬಾಯಿಂದ ನರೇಗಾ ಕೀರ್ತನೆ ಹಾಡಿಸಿ ಅವಯ್ಯನ ವ್ಯಾಜ್ಯಪಾಲರ ಮಾಡಕೊಂಟಿದ್ರಲ್ಲಾ. ಯಂಗೋ ‘ಬತ್ತೀನಿ ತಡಿರಿ’ ಅಂದ್ಕಂದು ಬಚಾವಾತು’ ಅಂದ್ರು ತುರೇಮಣೆ.
‘ಮನ್ನೆ ಶಾಸಕರು ದುಂಡಾವರ್ತಿ, ಗೂಂಡಾಗಿರಿ, ಅತ್ಯಾಚಾರಿ, ಪೋಕ್ಸೊ, ರೌಡಿ, ಬಲಾತ್ಕಾರಿ ಅಂತ ಹೇಳಿಕ್ಯಂದವ್ರೆ. ಯಾಕೋ ಕಾಣೆ’ ಅಂತಂದೆ.
‘ಅವೆಲ್ಲ ಅವರ ಹೆಸರು ಕಜಾ. ಜೈಲಗಿರೋ ದ್ವೇಷಭಕ್ತರು ‘ನಮಗೆ ಮನೆ ಊಟ ಬೇಕು, ಜೈಲಲ್ಲಿ ಊಟ ತಿನ್ನಂಗುಲ್ಲ’ ಅಂತ ಜುಲುಮೆ ಮಾಡ್ತಾವಂತೆ. ಜೈಲಲ್ಲಿ ಎಲ್ಲಾ ಬ್ಯಾರಕ್ಕಿಗೂ ಲೈವ್ ಸಿಸಿ ಕ್ಯಾಮೆರಾ ಹಾಕಿ ಜೈಲಲ್ಲಿ ಊಟ ಯಂಗಿರತದೆ, ಪಾರ್ಟಿಗಳು ಯಂಗಾತವೆ ಜನವೆಲ್ಲಾ ಲೈವಾಗಿ ನೋಡ್ಕಳಿ ಅಂತ ಬುಟ್ರಾಗಕುಲ್ವೇ. ಮೊಬೈಲ್ ಜಾಮರ್ ಹಾಕಿದ್ರೂ ಬರ್ಕತ್ತಾಯ್ತಿಲ್ಲವಂತೆ. ಲ್ಯಾಂಡ್‌ಲೈನ್ ಹಾಕಕೇನು ಮಲ್ಲಾಗರು?’ ತಿಪ್ಪಣ್ಣ ಕೇಳಿದ.
‘ಇವೆಲ್ಲಾ ಚಾಲುಗೆಟ್ಟ ಪೊಲೀಸುಗಳ ಚಿತಾವಣೆ ಕಯ್ಯಾ. ಪೊಲೀಸ ಪದದೇಲಿದ್ದ ಸ–ಕಾರವ ಸುತ್ತಿ ಮಗ್ಗುಲಿಗೆ ಮಡಿಕ್ಯಂದವೆ’ ತುರೇಮಣೆ ಪುಂಗಿದರು.
‘ಅಲ್ಲಾ ಮಹಾರಾಷ್ಟ್ರದೇಲಿ ಲಾರಿಲಿ ಸಾಗಿಸ್ತಿದ್ದ ಸಾವಿರ ಕೋಟಿ ಎಪ್ಪೆಸ್ ಆಗಿ ತಿಂಗಳಾದ್ರೂ ದೂರೇ ಕೊಟ್ಟಿಲ್ವಂತೆ. ಇಷ್ಟೆಲ್ಲಾ ಹಡಬಿಟ್ಟಿ ಕಾಸು ಲಾರೀಲಿ ತಕ್ಕೋದಾರೇ?’ ತಿಪ್ಪಣ್ಣ ಆಶ್ಚರ್ಯಪಟ್ಟ.
‘ಅಬಕಾರಿ ದುಪಟಿ ಕಮೀಸನರುಗಳೇನೂ ಕಮ್ಮಿಯಿಲ್ಲ ಅಣ್ತಮ್ಮ. ಲೈಸೆನ್ಸು ತಕ್ಕೋಕೆ ಬಂದೋರಿಗೆ ಅಮರಿಕ್ಯಂದು ಕೋಟಿ ಕೋಟಿ ಕಾಸು ಕೀಳ್ತಿರದು ಮಿನಿಸ್ಟ್ರು ತಿಮ್ಮಣ್ಣಗೆ ಗೊತ್ತಾತಿಲ್ಲವಂತೆ, ಪಾಪ’ ಅಂತ ಕತೆ ಬಿಚ್ಚಿದೆ.
‘ಒಂದೊತ್ತಿನ ಬೂವಕ್ಕೇ ಜನ ದೇಕ್ತಾ ಇರುವಾಗ ಇವು ನೋಡ್ರಯ್ಯಾ ಎರಡೂ ಕೈ ಚಾಚಿಕ್ಯಂದು ಸವ್ಯಚಾಚಿಗಳಾಗಿ ಬುಟ್ಟವೆ’ ಯಂಟಪ್ಪಣ್ಣನ ಕಲ್ಪನೆಗೆ ಉಕ್ಕಿದ ನಗು ಬುಗ್ಗನೆ ಹೊರಚೆಲ್ಲಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.