ADVERTISEMENT

ಚುರುಮುರಿ: ಉದಯವಾಗಲಿ...

ಬಿ.ಎನ್.ಮಲ್ಲೇಶ್
Published 13 ನವೆಂಬರ್ 2025, 19:10 IST
Last Updated 13 ನವೆಂಬರ್ 2025, 19:10 IST
_
_   

‘ಏನ್ರಲೆ ಇವತ್ತಿನ ಹೊಸ ಸುದ್ದಿ? ಬಾಂಬ್ ಬಿಟ್ಟು ಬೇರೆ ಏನರೆ ಹೇಳ್ರಿ...’ ಹರಟೆಕಟ್ಟೆಯಲ್ಲಿ ದುಬ್ಬೀರ ತಾಕೀತು ಮಾಡಿದ.

‘ನಮಗೆ ಪ್ರತ್ಯೇಕ ರಾಜ್ಯ ಬೇಕು’ ಎಂದ ಪರ್ಮೇಶಿ.

‘ಕೊಡೋಣ ಬಿಡು, ಬೇರೆ ಏನು?’

ADVERTISEMENT

‘ತಮ್ಮನ್ನ ಮಂತ್ರಿ ಮಾಡು ಅಂತ ಎಮ್ಮೆಲ್ಲೆಗಳು ಖರ್ಗೆ ಸಾಹೇಬ್ರ ಮನಿ ಬಾಗಿಲು ಬಡೀತದಾರಂತೆ...’ ತೆಪರೇಸಿ ಹೇಳಿದ.

‘ಬಾಗಿಲು ಬಡಿದರೆ ಮಂತ್ರಿ, ಒದ್ದರೆ ಮುಖ್ಯಮಂತ್ರಿ!’ ಗುಡ್ಡೆ ನಕ್ಕ.

‘ಕರೆಕ್ಟ್... ಆಮೇಲೆ ಇವತ್ತು ಬಿಹಾರ ಎಲೆಕ್ಷನ್ ಕೌಂಟಿಂಗು. ಯಾರು ಗೆಲ್ಲಬೋದು?’ ಕೊಟ್ರೇಶಿ ಕೇಳಿದ.

‘ಎಕ್ಸಿಟ್ ಫೈಲ್ ಆಗ್ಲೇ ಹೇಳೇತಲ್ಲ, ಮತ್ತೇನು?’ ಮಂಜಮ್ಮನ ಮುಖದಲ್ಲಿ ಖುಷಿ.

‘ನಿನ್ತೆಲಿ, ಅದು ಫೈಲ್ ಅಲ್ಲ ಪೋಲ್... ನಮ್ಗೆ ಎಕ್ಸಿಟ್ ಪೋಲ್ ಬ್ಯಾಡ, ಎಗ್ಜಾಕ್ಟ್ ಪೋಲ್ ಬೇಕು...’ ಎಂದ ದುಬ್ಬೀರ.

‘ಅಲ್ಲ, ಈ ಎಕ್ಸಿಟ್ ಪೋಲ್‌ನಲ್ಲೂ ಮತ ಕಳವು ಮಾಡಬೋದಾ?’ ಕೊಟ್ರೇಶಿ ಕೊಕ್ಕೆ.

‘ಅಲೆ ಇವ್ನ, ಕರೆಕ್ಟ್... ಇದ್ರ ಬಗ್ಗೆ ರಾಹುಲ್ ಗಾಂಧಿ ಯಾಕೆ ಇನ್ನೂ ಬಾಂಬ್ ಹಾಕಿಲ್ಲ?’

‘ಪಾಪ, ಬ್ಯುಸಿ ಅನ್ಸುತ್ತೆ. ಅದಿರ್ಲಿ, ನಮ್ಗೆ ಈಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು, ಅದರ ಬಗ್ಗೆ ಮಾತಾಡ್ರಿ’ ಎಂದ ಪರ್ಮೇಶಿ.

‘ಅದ್ಯಾಕೆ, ಎಲ್ರು ಒಂದೊಂದು ರಾಜ್ಯ ಮಾಡ್ಕಂಬಿಡಿ... ಉತ್ತರ ಕರ್ನಾಟಕ, ಮೈಸೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ ಅಂತ ಚಾಣ ಛಿದ್ರ ಮಾಡಿ ಒಡೆದಾಕ್ರಿ ಅತ್ಲಾಗೆ...’ ಮಂಜಮ್ಮಗೆ ಸಿಟ್ಟು ಬಂತು.

‘ಮಧ್ಯ ಕರ್ನಾಟಕ ಯಾಕೆ ಬಿಟ್ಟೆ? ಅದ್ನೂ ಮಾಡ್ರಿ, ನಾವು ದಾವಣಗೆರೆ ರಾಜಧಾನಿ ಮಾಡ್ಕಂತೀವಿ...’ ಎಂದ ತೆಪರೇಸಿ.

‘ನಿಂಗ್ಯಾವ ರಾಜ್ಯ ಬೇಕೋ ಗುಡ್ಡೆ?’ ದುಬ್ಬೀರ ಕೇಳಿದ.

‘ನಂಗೆ ‘ಮದ್ಯ’ ಕರ್ನಾಟಕ ಬೇಕು, ಕೊಡಿಸ್ತೀಯ?’ ಗುಡ್ಡೆ ನಕ್ಕ.

‘ಅಂದ್ರೆ ಎಣ್ಣೆ? ಥು ನಿನ್ ಜನ್ಮಕ್ಕೆ...’ ಎಂದಳು ಮಂಜಮ್ಮ. ಎಲ್ಲರೂ ಗೊಳ್ಳಂತ ನಕ್ಕರು.