ADVERTISEMENT

ಚುರುಮುರಿ: ಮೂಲೆವ್ಯಾಧಿ

ಲಿಂಗರಾಜು ಡಿ.ಎಸ್
Published 25 ಆಗಸ್ಟ್ 2020, 17:18 IST
Last Updated 25 ಆಗಸ್ಟ್ 2020, 17:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ತುರೇಮಣೆ ಮಾವಾರ ಮನೆತಕ್ಕೆ ಹೊಂಟಿದ್ದೋ. ‘ಏನು ಸಮಾಚಾರ?’ ಅಂತ ಕೇಳಿದೆ.

‘ನಮ್ಮಾವನಿಗೆ ಇಬ್ಬರೆಂಡರು ಕನೋ, ಕಾಂಗತ್ತೆ, ಕಮಲತ್ತೆ. ದೊಡ್ಡತ್ತೆಗೆ ಹುಲಿಯಾ, ಬಂಡೆ; ಚಿಕ್ಕತ್ತೆಗೆ ರಾಜಾಹುಲಿ, ನಳಿನ್ ಮಕ್ಕಳು. ರಾಜಾಹುಲಿ ಹಕ್ಕಿ-ಪಕ್ಸಿಗಳಿಗೆಲ್ಲ ಬಾಂಬೆಕಟ್ಟು ಹಾಕಿ ಮನೆ ಯವಾರ ಸುಪರ್ದಿಗೆ ತಗಂಡವ್ನೆ. ಆತ್ತೆದೀರಿಗೆ ಬೆಳಗ್ಗಿಂದ ಸಂದೆಗಂಟಾ ಹತ್ತಿದ್ದು ಹರಿಯಕುಲ್ಲ!’ ಅಂದರು.

ದೊಡ್ಡತ್ತೆ ತುರೆಮಣೆ ನೋಡಿದೇಟಿಗೆ ‘ಅಯ್ಯೋ ನನ ಕಂದ, ನಿಮ್ಮ ಚಿಕ್ಕತ್ತೆ ಮುಲ್ಲಗಿವಿ ಮೂಳಿ ಮಾತೆಲ್ಲ ಕದ್ದು ಕೇಳಿಸಿಗ್ಯತಳೆ ಕನಪ್ಪಾ! ಮನೆಗೆ ಮಂಚ-ಹಾಸಿಗೆ ತಂದಾಕಿ ಕ್ವಾರಂಟೈನು, ಸೀಲುಡೌನು ಅಂತ ಒಂದಕ್ಕೆರಡು ಲೆಕ್ಕ ಬರದವ್ರೆ! ಮನ್ನೆ ಪೋಲಿ-ಪಕಾರುಗಳ ಕರೆಸಿ ನಮ್ಮ ರೂಮು ಕಿಟಕಿ ಒಡ್ಯಾಕಿಸವ್ರೆ! ಬ್ಯಾರೇರಿಗೆ ಧಮಕಿ ಬೇರೆ ಹಾಕ್ತರಪ್ಪ. ಅವುಳ ಮಕ್ಕಳೇ ಗೊಬ್ಬರ ತುಂಬಕ್ಕೆ ಮಂಕ್ರಿ ಕೊಟ್ಟಿಲ್ಲ ಅಂತ ದನ ಮೇಸದ್ನೇ ಬುಟ್ಟವ್ರೆ. ನನ ದಾಸತ್ತುಗಾರ ಮಕ್ಕಳು ಪಾಂಡವರು ಆಳುವಾಗ ಎಲ್ಲಾ ನಡುಗೋರು ಕಯ್ಯ’ ಅಂತ ರೋಸಿತು. ಮನೆ ಒಳಗೆ ಚಿಕ್ಕತ್ತೆ ಸೌಟು ಹಿಡಕಂದು ನಿಂತಿತ್ತು!

ADVERTISEMENT

‘ಸಿಕ್ಕಿದ್ಲೇನಪ್ಪಾ ನನ್ನ ಸವತಿ? ನಾವು ದುಡ್ಡು ಲಪಟಾಸಿದಿವಂತೆ. ಈ ದೊರೆಸಾನಿ ಮಾತು ಕದ್ದು ಕೇಳಿಸಿಗ್ಯತೀವಂತೆ. ಮನ್ನೆ ಕೊತ್ತಮಿರಿ ತರಕೋಗಿ ಕುಂಡಿ ಸುಟ್ಕಂಡು ಬಂದುದ್ದ ನೀನು ಕಾಣಾ! ನಾವು ಲೂಟಿ ಚಾರ್ಜು ಮಾಡಿದೀವಂತೆ! ಇವರ ಕಡೇರ ಬಲವಂತಕ್ಕೆ ರಾಜಾವುಲಿ ಯವಾರ ತಗಂಡ. ಈಗ ಕಣ್ಣಿಗೆ ನಿದ್ದಿಲ್ದಂಗೆ ಮನೆ ನಿಭಾಸ್ತಾವನೆ. ರಾವುಗಾಯಿಲೆ ಬಂದ ಮ್ಯಾಲೆ ಬೂವಕ್ಕೆ ಹೆಂಗೆ ಅನ್ನಂಗಾಗ್ಯದೆ! ಸುಮ್ಮನೆ ನಿಷ್ಟೂರ ಮಾಡತರೆ. ಸುಳ್ಳು-ಜಳ್ಳು ಕಾಣದಿರೋ ನಾವು ಕೌರವರಂತೆ ಕನಪ್ಪ’ ಅಂತ ಕಣ್ಣಿಗೆ ಕಯ್ಯಿಟ್ಟಿತು ಚಿಕ್ಕತ್ತೆ.

‘ನೋಡಿದೇನಪ್ಪಾ! ಕಾಂಗಕ್ಕ-ಕಮಲಕ್ಕ ಈ ಕೇಲು ನಿಲ್ಲಿಸಿ ನನ್ನ ಯಕ್ಸ ಪ್ರಸ್ನೆಗೆ ಉತ್ತರ ಕೊಡ್ಲಿ ಅಂತನೆ ದ್ಯಾವಣ್ಣನ ಮಗ. ನಾನು ಬಡ ಪ್ರಜೆಯಂಗೆ ಮಂಗಲಾಚಿಕ್ಯಂಡು ಮೂಲೆ ಸೇರಿದ್ದೀನಿ’ ಅಂದರು ತುರೇಮಣೆ. ನಾನು ಅತ್ತೇದೀರ ಡ್ರಾಮಾವತಾರ ನೋಡಿ ದಂಗಾಗಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.