ADVERTISEMENT

ಮುಂದೆ... ನಾವು ಮುಂದೆ!

ಸುಮಂಗಲಾ
Published 21 ಮಾರ್ಚ್ 2021, 19:31 IST
Last Updated 21 ಮಾರ್ಚ್ 2021, 19:31 IST
   

‘ಟಾಪ್ ಮೂವತ್ತರಲ್ಲಿ ಇಪ್ಪತ್ತೆರಡು ನಮ್ಮ ದೇಶದಲ್ಲಿ... ಆಹಾ... ಓಹೋ... ನಾವೀಗ ಎಷ್ಟು ಮುಂದೆ...’ ಬೆಕ್ಕಣ್ಣ ಅಗದಿ ಭಯಂಕರ ಖುಷಿಯಲ್ಲಿ ಪದ್ಯ ಹಾಡುತ್ತಿತ್ತು.

‘ಏನಲೇ’ ಎಂದು ರೇಗುವಷ್ಟರಲ್ಲೇ ಪೇಪರ್ ಮುಖಕ್ಕೆ ಹಿಡಿಯಿತು.

‘ಮಂಗ್ಯಾನಂಥವ್ನೆ... ಟಾಪ್ ಮೂವತ್ತು ಅತಿಮಾಲಿನ್ಯಯುಕ್ತ ನಗರಗಳಲ್ಲಿ ಇಪ್ಪತ್ತೆರಡು ನಮ್ಮ ದೇಶದಾಗೆ ಐತಿ. ಇದ್ ಖುಷಿ ಸುದ್ದಿ ಅಲ್ಲಲೇ... ಉಸಿರುಗಟ್ಟಿಸೋ ಸುದ್ದಿ...’ ಎಂದು ಅದರ ಮೂತಿಗೆ ತಿವಿದೆ.

ADVERTISEMENT

ಸುದ್ದಿ ಸರಿಯಾಗಿ ಓದಿದ್ದೇ ಬೆಕ್ಕಣ್ಣನ ವರಸೆಯೇ ಬದಲಾಯಿತು. ‘ಇದೆಲ್ಲ ಸುಳ್ಳ್ ಸುದ್ದಿ... ನಮ್ಮ ಪ್ರಗತಿ ನೋಡಕ್ಕಾಗದಿ
ದ್ದೋರು ಹಿಂಗೆಲ್ಲ ಸ್ಟಡಿ ಮಾಡೀವಿ ಅಂತಾರ, ನಂಬಬ್ಯಾಡ’ ಎಂದು ನನಗೇ ಬುದ್ಧಿವಾದ ಹೇಳಿ ಮತ್ತೆ ಪೇಪರು ಓದತೊಡಗಿತು.

‘ಏ... ನೋಡಿಲ್ಲಿ... ವಿಶ್ವದಾಗೆ ನಾಕನೇ ಸ್ಥಾನ ನಮ್ಮದು...’ ಖುಷಿಯಿಂದ ಉಲಿಯಿತು.

‘ಸರಿಯಾಗಿ ನೋಡಲೇ... ಅದ್ ಹೊಂಡಗುಂಡಿ ರಸ್ತೆಗಳ ವಿಚಾರದಾಗೆ ನಾವು ನಾಕನೇ ಸ್ಥಾನ. ನಾವೀಗ ಫಸ್ಟ್‌ ಇರಾದು ಶಾಂತಿಯುತ ರೈತರ ಪ್ರತಿಭಟನೆಯಲ್ಲಿ ಮಾತ್ರ...’ ಎಂದು ಬೈದೆ.

ಬಿದ್ದರೂ ಮೀಸೆ ಮಣ್ಣಾಗದ ಜಟ್ಟಿಯಂತೆ... ‘ಆಗಲೇಳು... ದೊಡ್ಡಣ್ಣ ಅಮೆರಿಕನೇ ಮೂರನೇ ಸ್ಥಾನ, ಅವರಿಗಿಂತ ನಮ್ಮ ಹೊಂಡಗುಂಡಿ ರಸ್ತೇನೆ ಭೇಷ್ ಅಂದಂಗಾತಿಲ್ಲೋ’ ಎಂದಿತು.

ಕೊನೆಗೊಂದು ಸುದ್ದಿ ಓದಿದ್ದೇ ಹ್ಯಾಪುಮೂತಿ ಹಾಕಿ ಕೂತ ಬೆಕ್ಕಣ್ಣ ‘ನಾವ್ ಪಾಕಿಸ್ತಾನ ಅಥವಾ ಬಾಂಗ್ಲಾ ದೇಶಕ್ಕಾರೂ ಹೋಗಿರೂಣೇನಾ’ ಎಂದು ಕೇಳಿತು. ನಾನು ಭಯಗೊಂಡು ‘ನಮ್ಮನ್ನ ದೇಶ ದ್ರೋಹಿ ಅಂತ ಜೈಲಿಗಿ ಅಟ್ಟತಾರ, ಸುಮ್ಮಿರಲೇ’ ಎಂದು ಅದರ ಬಾಯಿ ಬಿಗಿಹಿಡಿದೆ. ಸುದ್ದಿ ಏನೆಂದರೆ, ವಿಶ್ವ ಸಂತೋಷ ಸೂಚ್ಯಂಕ ವರದಿಯ ಪ್ರಕಾರ, 150 ದೇಶಗಳಲ್ಲಿ ಭಾರತವು ಕೆಳಗಿನ 144ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾ 101, ಪಾಕಿಸ್ತಾನ 105ನೇ ಸ್ಥಾನದಲ್ಲಿದ್ದವು!

‘ಅತಿ ಸಂತೋಷದಿಂದ ಇರುವವರ ದೇಶ ಫಿನ್ಲೆಂಡಿಗೆ ಹೋಗೂದಂತೂ ಆಗಂಗಿಲ್ಲ. ಅದಕ್ಕ ಇಲ್ಲೇ ಅಕ್ಕಪಕ್ಕದಾಗಿರೋ ದೇಶಕ್ಕಾರೂ ಹೋಗೂಣಂತ’ ಮೆತ್ತಗೆ ಬಾಯಿಬಿಟ್ಟಿತು ಬೆಕ್ಕಣ್ಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.