ADVERTISEMENT

ಚುರುಮುರಿ: ಗಂಡಭೇರುಂಡ ಲಾಕೆಟ್!

‘ಕ್ಷೇತ್ರದ ಜನ ಕಂಡ್ ಇಡಿಯಾಕೆ ನಮ್ ಶಾಸಕ್ರಿಗೆಲ್ಲಾ ಗಂಡಭೇರುಂಡ ಲಾಕೆಟ್ ಕೊಟ್ಟಿದ್ದು ಒಳ್ಳೇದಾಯ್ತಲ್ವಾ?’ ಮಾತು ತೆಗೆದ ಗುದ್ಲಿಂಗ.

ತುರುವೇಕೆರೆ ಪ್ರಸಾದ್
Published 6 ಮಾರ್ಚ್ 2024, 23:11 IST
Last Updated 6 ಮಾರ್ಚ್ 2024, 23:11 IST
   

‘ಕ್ಷೇತ್ರದ ಜನ ಕಂಡ್ ಇಡಿಯಾಕೆ ನಮ್ ಶಾಸಕ್ರಿಗೆಲ್ಲಾ ಗಂಡಭೇರುಂಡ ಲಾಕೆಟ್ ಕೊಟ್ಟಿದ್ದು ಒಳ್ಳೇದಾಯ್ತಲ್ವಾ?’ ಮಾತು ತೆಗೆದ ಗುದ್ಲಿಂಗ.

‘ನಿನ್ ತಲೆ, ಕ್ಷೇತ್ರದ ಜನ ಕಂಡ್ ಇಡಿಯಾಕ್ ಅಲ್ಲಲೇ, ವಿಧಾನಸೌಧದಾಗೆ ಕಂಡ್ ಹಿಡಿಯಕ್ಕೆ ಕೊಟ್ಟಿರಾದು?’ ತಿದ್ದಿದ ಮಾಲಿಂಗ.

‘ಕೊಡಾದ್ ಕೊಟ್ಟವ್ರೆ ಗಿಳಿನೋ, ಶಾಂತಿ ಹಕ್ಕಿ ಪಾರಿವಾಳನೋ, ನವಿಲು, ಗರುಡ ಇಂಗೆ ಬೇರೆ ಯಾವ್ದಾರ ಪಕ್ಷಿ ಲಾಕೆಟ್ ಕೊಡಕಾಯ್ತಿತ್ತಿಲ್ವಾ?’

ADVERTISEMENT

‘ಅಂಗಲ್ಲಲೇ, ಗಂಡಭೇರುಂಡ ಅಂದ್ರೆ ತುಂಬಾ ಶಕ್ತಿಶಾಲಿ, ಪ್ರಭುತ್ವದ ಸಂಕೇತ ಕಣಲೇ!’ಎಂದ ಕಲ್ಲೇಶಿ.

‘ನಂಗೇನೋ ಈ ಎರಡು ತಲೆ ಪಕ್ಷಿನ ಲಾಕೆಟ್ನಾಗೆ ಹಾಕಿದ್ದು ಸರಿ ಕಾಣ್ತಿಲ್ಲ ಕಣಲೇ’ ಆಕ್ಷೇಪ ಎತ್ತಿದ ಚಿಕ್ಕೀರ.

‘ನೋಡಪ್ಪಾ, ನಮ್ ರಾಜಕೀಯ ನಾಯಕ್ರುದು ಶಾನೆ ದ್ವಂದ್ವ ಇರ್ತದೆ. ಈಗ ನೋಡು, ಉದಾಹರಣೆಗೆ, ಎಲೆಕ್ಷನ್ಗೆ ಮುಂಚೆ ಈ ಕ್ಷೇತ್ರದಲ್ ನಿಂತ್ಕಳ್ಲಾ ಆ ಕ್ಷೇತ್ರದಲ್ಲಿ ನಿಂತ್ಕಳ್ಲಾ ಅನ್ನೋ ದ್ವಂದ್ವ ಇರ್ತದೆ’.

‘ಊಂ ಕಣ್ಲಾ, ಆಮ್ಯಾಕೆ ವಿರೋಧ ಪಕ್ಷದಾಗೆ ಇರೋದು, ಆಡಳಿತ ಪಕ್ಷಕ್ಕೆ ಜೈ ಅನ್ನೋದು ನಡೀತನೇ ಇರ್ತದೆ. ಅವ್ರು ಎಲ್ ಅದಾರೆ ಅಂತ ಅವರಿಗೂ ಗೊತ್ತಿರಕಿಲ್ಲ, ವೋಟ್ ಹಾಕಿದ್ ಜನಕ್ಕೂ ಗೊತ್ತಿರಕಿಲ್ಲ’.

ಹೌದೇಳು,  ಈ ಪರಿಷತ್ತು, ರಾಜ್ಯಸಭೆ ಅಂತ ವೋಟು ಒತ್ತುವಾಗೆಲ್ಲಾ ಭೂತಸಾಕ್ಷಿನಾ ಇಲ್ಲ ಆತ್ಮಸಾಕ್ಷಿನಾ ಅನ್ನೋ ದ್ವಂದ್ವ ಇವರಿಗೆ ಕಾಡ್ತದೆ’.

‘ಆಮ್ಯಾಕೆ ಜನಸೇವೆಗೆ ಬರೀ ಜನಪ್ರತಿನಿಧಿ ಆದ್ರೆ ಸಾಕಾಗಕಿಲ್ಲ ಅಂತ ಮಂಡಳಿ, ನಿಗಮ ಅಂತ ಎಲ್ಡೆಲ್ಡಕ್ಕೆ ಕಾಲು ಆಕ್ಕಂಡಿರ್ತಾರೆ. ಅದಕ್ಕೇ ಗಂಡಭೇರುಂಡ ಲಾಕೆಟ್ ಕೊಟ್ಟಿರಾದೇ ಸೈ’ ಎಂದ ಗುದ್ಲಿಂಗ.

‘ಲೇಯ್, ಅದ್ರಾಗೆ ಚಿನ್ನ ಐತಂತೆ ಕಣ್ರಲಾ! ನಮ್ ಬ್ರಿಟನ್ ಪ್ರಧಾನಿ ಹೆಂಗಸ್ರು ಗಂಡಭೇರುಂಡ ಪೆಂಡೆಂಟ್ ಮಾಡಿಸ್ಕಂಡವ್ರಂತೆ. ನಮ್ ನಾಯಕರ ಹೆಂಡ್ತೀರೂ ನಮಗೂ ಚಿನ್ನದ ಗಂಡಭೇರುಂಡ ಮಾಡುಸ್ಕೊಡಿ ಅನ್ನಕಿಲ್ವಾ?’

‘ನ್ಯಾಯ ಬಿಡು, ಮಾಡುಸ್ಕೊಡ್ಲೇಬೇಕು, ಇಲ್ಲ ಅಂದ್ರೆ ಸಾಹೇಬ್ರುನ್ನ ವಿಧಾನಸೌಧಕ್ ಬಿಟ್ರೂ ಮನೆ ಒಳಕ್ಕೆ ಬಿಡಂಗಿಲ್ಲ’ ಎಂದ ಪರ್ಮೇಶಿ.
ಎಲ್ಲಾ ಗೊಳ್ಳನೆ ನಕ್ಕರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.