ADVERTISEMENT

ಚುರುಮುರಿ | ಓಟಿ ಹಬ್!

ತುರುವೇಕೆರೆ ಪ್ರಸಾದ್
Published 18 ಅಕ್ಟೋಬರ್ 2025, 0:22 IST
Last Updated 18 ಅಕ್ಟೋಬರ್ 2025, 0:22 IST
   

‘ಲೇಯ್‌ ನಮ್ ರಾಜಕೀಯದೋರಿಗೆಲ್ಲಾ ತಲೆ ಸಿಕ್ಕಾಪಟ್ಟೆ ಶಾಕ್‌ ಆಗದೆ ಕಣ್ರಲಾ’ ಎಂದ ಗುದ್ಲಿಂಗ ಹರಟೆಕಟ್ಟೇಲಿ!

‘ಯಾಕ್ಲಾ? ಇನ್ನೂ ವೈಶಾಖನೇ ಬಂದಿಲ್ವಲ್ಲ! ವೈ ಮೈಶಾಖ?’ ಕೇಳಿದ ಮಾಲಿಂಗ.

‘ಅಯ್ಯೋ! ವೈಶಾಖ ಬರೋದಲ್ಲ, ಗೂಗಲ್
ಮ್ಯಾಪು ದಾರಿತಪ್ಪಿ ಐ.ಟಿ ಹಬ್ಬು ವಿಶಾಖಕ್ಕೆ ಹೋಯ್ತಲ್ಲ ಅಂತ’.

ADVERTISEMENT

‘ಯದಾ ಯದಾ ರಸ್ತೆ ಗಬ್ಬು ಭವತಿ, ತದಾ ತದಾ ಹಬ್ಬು ಗಡಿಬಿಟ್ಟು ಹೋಗ್ಯೆಂತಿ’ ಎಂದು ಹುಬ್ಬು ಹಾರಿಸಿದ ಕಲ್ಲೇಶಿ.

‘ಇಂಗ್ ಆಗ್ಬಾರ‍್ದಾಗಿತ್ತು ಕಣ್ಲಾ, ರಸ್ತೆ ಗುಂಡಿಯಿಂದಲೇ ಆಂಧ್ರದೋರು ‘ರಾಂಡಿ ರಾಂಡಿ’ ಅಂತ ಕರೆದು ಹಬ್ ಬುಟ್ಟಿಗಾಕ್ಕಂಡವ್ರೆ ಅಂತ ಕಮಲದೋರು ಕೊಂಡಿ
ಬಿಚ್ಚಿಕಚ್ಚುತಾವ್ರಲ್ಲ’.

‘ಅಂಗೂ ಇರ‍್ಬಹುದು, ಬೆಂಗಳೂರು ತುಂಬಾ ಗುಂಡಿ, ಕೊಚ್ಚೆ ಅಂತ ಪಿಚ್ಚೆ ಅದನ್ನ ಆಂಧ್ರಕ್ಕೆ ಕೊಟ್ಟಿರಬಹುದು’.

‘ಕೊಟ್ರೆ ಕೊಡ್ತಾರೆ ಬಿಡ್ಲಾ, ಇದ್ಕೆಲ್ಲಾ ನಾವು ಸೊಪ್ಪು ಆಕಕಿಲ್ಲ, ನಮ್ ಕೊಚ್ಚೆ, ನಮ್ಮ ಹೆಮ್ಮೆ! ನಮ್ ಗುಂಡಿ, ನಮ್ ಎಮ್ಮೆ. ಇದೆಲ್ಲಾ ಒಂಥರಾ ಬೆಂಗಳೂರು ಬ್ರಾಂಡು ಕಣ್ಲಾ’.

‘ಊ ಕಣ್ಲಾ, ಏನ್ ಪಿಚ್ಚೆ ಒಬ್ನೇನಾ ಇರೋದು? ಅಲನ್ ಮಸ್ಕ್ ಇಲ್ವಾ? ಮಸ್ಕಾ ಒಡ್ದು ಅವನನ್ನ ಕರ‍್ಕಂಡು ಬಂದ್ರಾಯ್ತು’.

‘ಆದ್ರೂ 10 ಸಾವಿರ ಕೋಟಿ ಓಯ್ತಂತಲ್ಲ, ಅದ್ನೆಂಗ್ ಕರ‍್ಕಳಾದು?’.

‘ಇಲ್ಲೇ ರಸ್ತೇಲೇ ಒಂದು ರಾಷ್ಟ್ರಮಟ್ಟದ ಕಂಬಳ ಮಾಡ್ಬಹುದು!’

‘ಹೌದು, ಅಂಗೇ ಈ ರಿಯಾಲಿಟಿ ಶೋಗಳಿಗೆ ಟಾಸ್ಕ್ ಮಾಡಕ್ಕೆ ರಸ್ತೆ ಬಾಡಿಗೆ ಕೊಟ್ರೆ ಒಂದಿಷ್ಟು ಕೋಟಿ ಬತ್ತದೆ’.

‘ಹಬ್ ಓದ್ರೆ ಓಯ್ತು ಬಿಡ್ರುಲಾ! ಇನ್ನೊಂದು ಸಾವಿರ ಪಬ್ ತೆಗುದ್ರಾಯ್ತು. ಅಲ್ಲೇ ಒಂದಿಷ್ಟು ಕೋಟಿ ಬಾಚ್ಕಬೋದಲ್ಲ’.

‘ಕುಡ್ದೋರೆಲ್ಲ ಬಂದು ಇಲ್ಲೇ ಗುಂಡಿಗೆ ಬಿದ್ರೆ ಅದೆಲ್ಲಾ ಪರಿಹಾರ ಕೊಡಕ್ಕೇ ಆಯ್ತದೆ. ಐಟಿ ಹಬ್ ಬದ್ಲು, ಓಟಿ (ಆಪರೇಷನ್ ಥಿಯೇಟರ್) ಹಬ್ ಮಾಡ್ಬೇಕಾಯ್ತದೆ’ ಎಂದ ಪರ‍್ಮೇಶಿ.

ಎಲ್ಲಾ ಗೊಳ್ಳನೆ ನಕ್ಕರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.