ADVERTISEMENT

ಚುರುಮುರಿ: ತೆಪರೇಸಿ ದೇವರು!

ಬಿ.ಎನ್.ಮಲ್ಲೇಶ್
Published 12 ಮೇ 2022, 22:00 IST
Last Updated 12 ಮೇ 2022, 22:00 IST
Churumuri==13052022
Churumuri==13052022   

ಹರಟೆಕಟ್ಟೇಲಿ ಲೌಡ್‌ಸ್ಪೀಕರ್ ಮತ್ತು ಭಜನೆ ಬಗ್ಗೆ ಕಾವೇರಿದ ಚರ್ಚೆ ನಡೆದಿತ್ತು. ಮನೇಲಿ ಹೆಂಡತಿಯಿಂದ ಪೂಜೆ, ಮಂಗಳಾರತಿ ಸೇವೆ ಮಾಡಿಸಿಕೊಂಡು ಆ ಸಿಟ್ಟಿಗೆ ‘ತೀರ್ಥಸ್ವರೂಪ’ ನಾಗಿ ಹರಟೆಕಟ್ಟೆಗೆ ಬಂದಿದ್ದ ತೆಪರೇಸಿ, ‘ನೋ ಅವಾಜ್, ನೋ ಸೌಂಡ್... ಯಾರೂ ಮಾತಾಡಂಗಿಲ್ಲ’ ಎನ್ನುತ್ತ ಎಲ್ಲರ ಮೇಲೂ ಎಗರಿ ಬೀಳುತ್ತಿದ್ದ.

‘ಯಾಕಲೆ, ಹೆಂಗೈತಿ ಮೈಯಾಗೆ? ನಾವಿಲ್ಲಿ ಮಾತಾಡಕೇ ಬಂದಿರೋದು’ ದುಬ್ಬೀರ ಸಿಟ್ಟಿಗೆದ್ದ.

‘ನನ್ ಪವರ್ ನಿಮಿಗೆ ಗೊತ್ತಿಲ್ಲ, ನಾನು ಹೇಳಿದ್ಮೇಲೆ ಮುಗೀತು. ಯಾರೂ ಪಿಟಿಕ್ಕನ್ನಂಗಿಲ್ಲ...’

ADVERTISEMENT

‘ನಿನ್ತೆಲಿ, ಪವರ್ ಇಳಿದ್ಮೇಲೆ ನಿನ್ ಪುಂಗಿ ಹೆಂಗ್ ಬಂದ್ ಮಾಡ್ಬೇಕು ಅಂತ ನಂಗೊತ್ತು’.

‘ಲೇಯ್, ನನ್ ಪುಂಗಿ ಬಂದ್ ಮಾಡೋದಿರ್‍ಲಿ, ಅದೇನೋ ಲೌಡ್‌ಸ್ಪೀಕರ್ ಬಂದ್, ಭಜನಿ ವಿಷಯ ಮಾತಾಡ್ತಿದ್ರಿ? ಹಂಗಾದ್ರೆ ನಮ್ ದೇವರ ಭಜನೀನೂ ಮಾಡ್ರಿ...’ ತೆಪರೇಸಿ ವಾದಕ್ಕಿಳಿದ.

‘ಯಾವುದಪ್ಪ ನಿನ್ ದೇವರು? ಒಳಗಿರೋದಾ, ಮೈಮೇಲಿರೋದಾ?’ ಗುಡ್ಡೆ ನಕ್ಕ.

‘ಲೇಯ್ ಸರಿಯಾಗ್ ಮಾತಾಡು, ನಮ್ ದೇವ್ರಿಗೆ ಜಾತಿ ಇಲ್ಲ, ಧರ್ಮ ಇಲ್ಲ. ಎಲ್ರಿಗೂ ಬೇಕಾಗಿರೋ ಏಕೈಕ ದೇವ್ರು ನಮ್ದು...’

‘ಆತು ಬಿಡಪ, ನಿಮ್ ದೇವ್ರ ಭಜನಿ ನೀನೇ ಮಾಡ್ಕೊ. ಈಗೇನು ಬೇರೇರು ಮಾತಾಡಕೆ ಬಿಡ್ತೀಯೋ ಇಲ್ಲೋ?’ ದುಬ್ಬೀರನಿಗೆ ಕೋಪ.

‘ಬಿಡಲ್ಲ, ರಾಜಕೀಯದೋರ ಥರ ಖಾಲಿ ಪುಕ್ಸೆಟ್ಟಿ ಮಾತಾಡೋದು ಬಿಡ್ರಿ. ನೀರು, ವಿಸ್ಕಿ ಮಿಕ್ಸ್ ಆದಂಗೆ ಜನಾನ ಒಂದು ಮಾಡೋದು ಕಲೀರಿ’.

‘ತೆಲಿ ಕೆಟ್ಟೋನ ಸಾವಾಸ ಆತಪ, ನಾ ಬರ್ತೀನಿ...’ ದುಬ್ಬೀರ ಎದ್ದು ನಿಂತ.

‘ಲೇಯ್, ಒಂದ್ ನಿಮಿಷ ತಡಿ, ಅದೇನೋ ಲೌಡ್‌ಸ್ಪೀಕರ್ ಬಂದ್ ಅಂತಿದ್ರಲ್ಲ, ನಿಮಗೆ ಒಂದ್ ಚಾಲೆಂಜು’.

‘ಏನು?’ ಗುಡ್ಡೆ ಕೇಳಿದ.

‘ನಿಮಗೆ ತಾಕತ್ತಿದ್ರೆ ಮೊದ್ಲು ‘ನಮ್ಮನಿ’ ಲೌಡ್‌ಸ್ಪೀಕರ್ ಬಂದ್ ಮಾಡಿಸ್ರಲೆ ನೋಡಾಣ... ಆಗ್ತತಾ?’

ತೆಪರೇಸಿ ಚಾಲೆಂಜಿಗೆ ಯಾರೂ ಪಿಟಿಕ್ಕೆನ್ನಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.