ADVERTISEMENT

ಚುರುಮುರಿ: ಶಂಕರಾಂತರ!

ಚಂದ್ರಕಾಂತ ವಡ್ಡು
Published 11 ಆಗಸ್ಟ್ 2022, 21:45 IST
Last Updated 11 ಆಗಸ್ಟ್ 2022, 21:45 IST
   

‘ಐ ರಿಮೆಂಬರ್ ಗೋಯಿಂಗ್ ವಿತ್ ಕಾಂಗ್ರೆಸ್ ಲೀಡರಶಿಪ್... ವಿತ್ ಸಿದ್ದರಾಮಯ್ಯಾಜೀ, ಡಿ.ಕೆ.ಶಿವಕುಮಾರಜೀ ಟು ದ ಇಂದಿರಾ ಕ್ಯಾಂಟೀನ್…’ ಎಂದು ‘ಸಿದ್ದರಾಮೋತ್ಸವ’ದಲ್ಲಿ ಐದನೇ ಪೀಳಿಗೆಯ ಗಾಂಧಿ ಹೇಳಿದ್ದನ್ನು ಕೇಳಿಸಿಕೊಂಡ ಮೊದಲ ಪೀಳಿಗೆಯ ಇಂಗ್ಲಿಷ್ ಮೀಡಿಯಮ್ ಮಗ, ‘ಅಲ್ಲಿಗೆ ಹೋಗಿ ರುಚಿ ನೋಡೋಣ’ ಅಂತ ಗಂಟುಬಿದ್ದ.

‘ಅಲ್ಲೇನೋ ಅಂಥ ರುಚಿ? ರೇಟು ಸಸ್ತಾ ಇರುತ್ತದಷ್ಟೇ…’ ತಿಂಗಳೇಶನ ನಿರಾಸಕ್ತಿ.

ಎಂದಿನಂತೆ ‘ಅಯ್ಯೋ ನಿನಗೆ ಗೊತ್ತಾಗಲ್ಲ…’ ಎಂಬ ಡಿಫಾಲ್ಟ್ ಸಂಬೋಧನೆ ಮೂಲಕ ಮಗನ ಮಾತು. ‘ವಿ ಹ್ಯಾಡ್ ಡಿಲೀಷಿಯಸ್ ಫುಡ್ ಧೇರ್’ ಅಂತ ಅವರೇ ಹೇಳಿದ್ದಾರೆ. ಅಷ್ಟೊಂದು ರುಚಿಕಟ್ಟು…’ ಮಗನ ಬಾಯಲ್ಲಿ ಜೊಲ್ಲು.

ADVERTISEMENT

ಇಂಗ್ಲಿಷ್ ತಲೆಗೆ ಹತ್ತಲಿಲ್ಲ ಅಂತ ವಿಪರೀತ ಕನ್ನಡಾಭಿಮಾನ ಬೆಳೆಸಿಕೊಂಡಿದ್ದ ತಿಂಗಳೇಶ, ‘ಅವರ ಭಾಷಣದ ಕನ್ನಡ ಅನುವಾದ ಕಿವಿಯಾರೆ ಕೇಳೇನಿ, ‘ನಾವು ಅಧಿಕಾರದಲ್ಲಿ ಇದ್ದಾಗ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಮುಖಾಂತರ ಪೌಷ್ಟಿಕ ಆಹಾರ ಕೊಡ್ತಾ ಇದ್ವಿ, ಕರ್ನಾಟಕದಲ್ಲಿ ಇಂಥ ಕಾರ್ಯಕ್ರಮಗಳನ್ನ ಜನ್ರಿಗೆ ತಲುಪಿಸೋದಕ್ಕೆ ಪ್ರಯತ್ನಶೀಲರಾಗಿದ್ದೇವೆ’ ಅಂತ ಸಮಾಜವಾದಿ ಶಂಕರ್ ಕಾಕಾ ತಮ್ಮ ಬಾಯಾರೆ ಹೇಳ್ಯಾರ. ನೀನು ನೋಡಿದರೆ ಇಂದಿರಾ ಕ್ಯಾಂಟೀನ್ ಎಳೆದು ತರುತ್ತೀಯ...’

ಅಪ್ಪ, ಮಗನ ಸಮ್-ಭಾಷಣಾ ಶೈಲಿ ಮುಂದಿನ ಮುಖ್ಯಮಂತ್ರಿ ಕುರಿತ ಹೇಳಿಕೆಯಂತೆ ಗೊಂದಲ ಮೂಡಿಸಿದ್ದನ್ನು ತಕ್ಷಣ ಗ್ರಹಿಸಿದ ತಾಯಿ ಬಾಯಿ ಹಾಕಿದಳು, ‘ಇದು ಭಾಷಾ-ಅಂತರ ಅಲ್ಲ; ಬೇಕಿದ್ದರೆ ಶಂಕರಾಂತರ ಅನ್ನಿ. ಹೈಕಮಾಂಡ್ ಭಾಷೆಯ ಅನುವಾದ ಕೊಂಚ ಕಷ್ಟ. ಹೈಕಮಾಂಡ್ ಸಾಮೂಹಿಕ ನಾಯಕತ್ವ ಅಂದ್ರೆ ಸ್ಥಳೀಯ ನಾಯಕರಿಗೆ ತನ್ನದೇ ನಾಯಕತ್ವ ಎಂದು ಕೇಳಿಸುತ್ತೆ’.

‘ಅದೇ ರೀತಿ ನೆರೆ ಪರಿಹಾರ, ಜಿಎಸ್‌ಟಿ ಪಾಲು ಇತ್ಯಾದಿ ರಾಜ್ಯದ ಇಂಜಿನ್ ಮಂಡಿಸುವ ಸಾವಿರಾರು ಕೋಟಿ ಬೇಡಿಕೆಯನ್ನು ಒಕ್ಕೂಟದ ಇಂಜಿನ್ ಕೇವಲ ನೂರಾರು ಕೋಟಿಯೆಂದು ಭಾಷಾಂತರಿಸಿಕೊಳ್ಳುತ್ತದೆ...’ ತಿಂಗಳೇಶ ಸೇರಿಸಿದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.