ADVERTISEMENT

ಚುರುಮುರಿ: ನುಡಿ ಕೈಗಾರಿಕೆ

ಮಣ್ಣೆ ರಾಜು
Published 27 ಡಿಸೆಂಬರ್ 2022, 23:00 IST
Last Updated 27 ಡಿಸೆಂಬರ್ 2022, 23:00 IST
   

‘ಸಾಹಿತ್ಯ ಸಮ್ಮೇಳನಕ್ಕೆ ಬಂದಾಗ ನಮ್ಮ ಮನೆಯಲ್ಲೇ ವಾಸ್ತವ್ಯ ಮಾಡು ಅಂತ ಹಾವೇರಿ ಗೆಳೆಯ ಫೋನ್ ಮಾಡಿದ್ದ...’ ಅಂದ ಶಂಕ್ರಿ.

‘ಒಳ್ಳೆಯದಾಯ್ತು, ಸಾಹಿತ್ಯ ಪರಿಷತ್ ಅಧ್ಯಕ್ಷರೂ ಹಾವೇರಿಯಲ್ಲಿ ಜನಸಾಮಾನ್ಯರ ಮನೆಯಲ್ಲಿ ವಾಸ್ತವ್ಯ ಮಾಡ್ತಾರಂತೆ’ ಅಂದಳು ಸುಮಿ.

‘ಅಧ್ಯಕ್ಷರ ಪ್ರೇರಣೆಯಿಂದ ಪರಿಷತ್ತಿನ ಪದಾಧಿಕಾರಿಗಳೂ ವಾಸ್ತವ್ಯ ಆರಂಭಿಸಿ ಮನೆಮನೆಗಳಲ್ಲಿ ಕನ್ನಡ ಜಾಗೃತಿ ಪಾಠ ಹೇಳುವಂತಾಗಬೇಕು’.

ADVERTISEMENT

‘ಹೌದು, ಇಂಗ್ಲಿಷ್ ಮೀಡಿಯಂ ಭ್ರಮೆಗೆ ಒಳಗಾಗಿ ಕನ್ನಡ ಕಡೆಗಣಿಸಿರುವವರಿಗೆ ಮೊದಲು ತಕ್ಕ ಪಾಠ ಕಲಿಸಬೇಕು’.

ಅಷ್ಟರಲ್ಲಿ ಗೆಳತಿ ಪದ್ಮಾ ಬಂದು, ‘ನುಡಿ ಕೈಗಾರಿಕೆ ಶುರುಮಾಡಿದ್ದೇನೆ...’ ಎಂದು ಸ್ವೀಟ್ ಕೊಟ್ಟಳು.

‘ಗುಡಿ ಕೈಗಾರಿಕೆ ಗೊತ್ತು, ಇದೇನು ನುಡಿ ಕೈಗಾರಿಕೆ?’ ಸುಮಿ ಕೇಳಿದಳು.

‘ಕನ್ನಡೇತರರಿಗೆ ವ್ಯವಹಾರಗನ್ನಡ ಕಲಿಸುವ ಕಾಯಕ. ಕನ್ನಡ ಗೊತ್ತಿಲ್ಲದೆ ಅವರಿಗೆ ದೈನಂದಿನ ವ್ಯವಹಾರಕ್ಕೆ ಸಮಸ್ಯೆಯಾಗಿತ್ತಂತೆ. ದಿನಬಳಕೆ ಪದಾರ್ಥಗಳ ಕನ್ನಡದ ಹೆಸರು ಹೇಳಿಕೊಟ್ಟಿ
ದ್ದೇನೆ, ಮಳಿಗೆ, ಮಾರ್ಕೆಟ್‍ನಲ್ಲಿ ಕನ್ನಡದಲ್ಲಿ ಚೌಕಾಸಿ ಮಾಡುವ ಕಲೆಗಾರಿಕೆ, ಕೂಡಿ, ಕಳೆಯುವ ಕನ್ನಡದ ಲೆಕ್ಕವನ್ನೂ ಕಲಿಸಿದ್ದೇನೆ’.

‘ನೆರೆಹೊರೆಯವರೊಂದಿಗೆ ಸಹಬಾಳ್ವೆ ಕನ್ನಡ, ಜಗಳದ ಸಂದರ್ಭಕ್ಕೆ ಕನ್ನಡ ಬೈಗುಳ ಕಲಿಸಿದ್ದೀರಾ’ ಶಂಕ್ರಿ ಕೇಳಿದ.

‘ಹೌದು, ಕನ್ನಡ ಬರೆಯುವ, ಕನ್ನಡಿಗರೊಂದಿಗೆ ಬೆರೆಯುವುದನ್ನು ಕಲಿಸಿ ಅವರ ವ್ಯವಹಾರ, ಸಂಸಾರವನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ’.

‘ವೆರಿಗುಡ್...’

‘ಕನ್ನಡಿಗರಿಗೆ ಉದ್ಯೋಗ ಕೊಟ್ಟರೆ ಸಾಲದು, ಕನ್ನಡ ಬಳಸಿ, ಗಳಿಸುವ ನುಡಿ ಕೈಗಾರಿಕೆಗಳನ್ನು ಸರ್ಕಾರ ರೂಪಿಸಬೇಕು...’ ಎನ್ನುತ್ತಾ ಪದ್ಮಾ ಹೊರಟಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.