ADVERTISEMENT

ಆರ್‍ಸಿಬಿ ವೋಟು!

ಲಿಂಗರಾಜು ಡಿ.ಎಸ್
Published 15 ಏಪ್ರಿಲ್ 2019, 20:40 IST
Last Updated 15 ಏಪ್ರಿಲ್ 2019, 20:40 IST
ಚುರುಮುರಿ
ಚುರುಮುರಿ   

ಎಚ್‍ಎಂಟಿ, ಮೋನ-ರಾಗು ಜಂಗೀ ಕುಸ್ತಿಯಲ್ಲಿ ನನ್ನತ್ರ ವೋಟು ಕೇಳಕ್ಕೆ ಯಾರೂ ಬಂದಿಲ್ಲವಲ್ಲ ಅಂತ ಕಸಿವಿಸಿಯಾಗ್ತಿತ್ತು. ಇದಕ್ಕೆ ಕಾರಣ ಏನು ಅಂತ ಹುಡುಕಿಕೊಂಡು ಹೊರಟಾಗ, ಹಾಸನದಲ್ಲಿ ಡೇರಣ್ಣ ಇರಬರ ನಿಂಬೇಹಣ್ಣೆಲ್ಲಾ ತಗತಿದ್ರು. ಹೆಂಗನ್ನ ಇರಲಿ ಅಂತ ನನ್ನ ನೋವು ತೋಡಿಕೊಂಡೆ. ಅವರು ‘ನೀನು ಮೂರು ಕ್ಯಾಟಗರಿಲೀ ಯಾವುದ್ರಾಗಿದ್ದೀಯ?’ ಅಂದ್ರು. ನನಗೆ ಅರ್ಥವಾಗದೇ ಪೆಚ್ಚಾದೆ.

‘ನೋಡ್ಲಾ ಯಾವ ಕ್ಷೇತ್ರದಲ್ಲಾದರೂ 60 ಪರಸೆಂಟು ವೋಟಿಂಗ್ ಆಯ್ತದೆ. ಬರದೇ ಇರೋ 40 ಪರ್ಸೆಂಟಲ್ಲಿ ಸತ್ತೋರು, ಕೆಟ್ಟೋರು, ಊರು ಬಿಟ್ಟೋರು, ಟೂರು ಹೋದೋರು ಇರತರೆ. ಅದು ಬುಟ್ಟುಬುಡು’ ಅಂದ್ರು.

‘ಸರಿ ಕನಣ್ಣಾ ಉಳಿದ 60 ಹೆಂಗೆ?’ ಅಂದೆ.

ADVERTISEMENT

‘ರಾಜಕೀಯದ ಪಾರ್ಟಿಗಳಿಗೆ ಅದರದ್ದೇ 10-10 ಪರ್ಸೆಂಟ್ ವೋಟ್ ಇರತವೆ. ಇಲ್ಲಿ ಮೂರೂ ಪಕ್ಸಕ್ಕೆ 30 ಪರಸೆಂಟ್ ಆಯಾಯಾ ಪಾರ್ಟಿಗೇ ಬೀಳ್ತವೆ. ಇದು ಎರಡನೇ ಕ್ಯಾಟಗರಿ’.

‘ಆಯ್ತಣ್ಣಾ, ಇನ್ನುಳಿದ 30 ಹೆಂಗೆ?’ ಅಂದೆ.

‘ತಡೀಲಾ ಅದ್ವಾನವೇ 20 ಪರಸೆಂಟ್ ಅದಲ್ಲಾ, ಅದೇ ಡಿಸೈಡಿಂಗ್ ವೋಟು’ ಅಂದ್ರು ಡೇರಣ್ಣ.

‘ನನ್ನಂತೋರೇ ಅಲ್ಲವೇನಣ್ಣಾ 20 ಪರಸೆಂಟಲ್ಲಿರಾದು. ಗೊತ್ತಾಯ್ತು ಬುಡು’ ಅಂದೆ. ‘ಅಹಹಾ ಚೆಲುವ! ಈ 20 ಪರ್ಸೆಂಟದಲ್ಲಾ ಅದೇ ವೋಟ್ ಬ್ಯಾಂಕ್ ಕಣೋ. ಇದನ್ನ ಬುಕ್ ಮಾಡಕ್ಕೆ ಯಾರಿಗೆ ತಾಕತ್ ಅದೋ ಅವರೇ ಗೆಲ್ಲದು. ಇದು ಒಂದನೇ ಕ್ಯಾಟಗರಿ’ ಅಂದ್ರು.

‘ಅಣ್ಣಾ, ಅಂದ್ರೆ ನಾನು ಎಲ್ಲಿದ್ದೀನಿ?’ ಅಂತ ಕೇಳಿದೆ.

‘ನೋಡ್ಲಾ ನೀವು ಮೂರನೇ ಕ್ಯಾಟಗರಿಯೋರು ಎಡಬಿಡಂಗಿಗಳು. ಯಾರನ್ನೂ ಗೆಲ್ಲಿಸಲಾರ್‍ರಿ ಯಾರನ್ನೂ ಸೋಲಿಸಲಾರ್‍ರಿ. ಎಲ್ಲಾ ಪಕ್ಷಕ್ಕೂ ಬೈದು ನೋಟಾ ಅಂತ ಒತ್ತಿ ಬರ್ತೀರಿ! ಲೆಕ್ಕಕ್ಕೆ-ಜಮಕ್ಕೆ ಬರದೇ ಇರೋ ಆರ್‍ಸಿಬಿ ತಾವಾ ಯಾರು ಬಂದಾರೋ’ ಅಂದ್ರು ಡೇರಣ್ಣ. ನನ್ನ ನೋಟಾ ವೋಟಿನ ಪರಿಸ್ಥಿತಿ ಮಂತ್ರಿ ಪದವಿ ಸಿಗದೇ ಇರೋ ಶಾಸಕನ ಥರಾ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.