ADVERTISEMENT

ಚುರುಮುರಿ: ರೊಮ್ಯಾಂಟಿಕ್ ಪೇಯ್ನ್!

ಚಂದ್ರಕಾಂತ ವಡ್ಡು
Published 19 ಸೆಪ್ಟೆಂಬರ್ 2025, 23:30 IST
Last Updated 19 ಸೆಪ್ಟೆಂಬರ್ 2025, 23:30 IST
   

‘ಧರ್ಮಸ್ಥಳದಲ್ಲಿ ಬುರುಡೆಗಳಾದರೂ ಸಿಕ್ಕಾವು… ನಮ್ಮ ಮನೆಯಲ್ಲಿ ಬೂಟುಗಳೇ ಸಿಗಲಾರವು…’ ಬೆಳಗಿನ ವಿಹಾರಕ್ಕೆ ಹೊರಟಿದ್ದ ತಿಂಗಳೇಶ, ಹೆಂಡತಿಯೆದುರು ಗೊಣಗಿದ.

‘ನಿಮ್ಮದು ಪ್ರತಿದಿನ ಇದ್ದದ್ದೇ ಗೋಳು. ನಿನ್ನೆ ವಾಕಿಂಗ್‌ನಿಂದ ಬಂದು ಎಲ್ಲಿ ಬಿಚ್ಚಿಟ್ಟಿದ್ದಿರಿ?’

‘ಅದು ಗೊತ್ತಿದ್ರೆ ನಿನ್ನನ್ನ್ಯಾಕೆ ಕೇಳ್ತಿದ್ದೆ? ಆ ನಿನ್ನ ಮಗ ಎಲ್ಲಾದ್ರೂ ಬಚ್ಚಿಟ್ಟಿದ್ದಾನು ಕೇಳಿನೋಡು’.

ADVERTISEMENT

‘ನಾನೇನೋ ಷಡ್ಯಂತ್ರ ಮಾಡಿದಂತೆ ಆಡ್ತೀರಲ್ಲ, ಅಷ್ಟಕ್ಕೂ ಬಚ್ಚಿಡಲು ಅವೇನು ಕಡತಗಳಾ? ನಾನೇನು ಸರ್ಕಾರಿ ನೌಕರನಾ? ಲಕ್ಷಾಂತರ ಲಂಚ ಕೊಟ್ಟು ಹುದ್ದೆಗೆ ಬಂದಿದ್ದೀನಾ?’ ಮಗನೂ ಬಿಸಿಯಾದ.

‘ಹೋಗಲಿ ಬಿಡಿ, ನಮ್ಮಲ್ಲೇಕೆ ಒಳಜಗಳ? ಒಂದು ಎಸ್ಐಟಿ ರಚಿಸಿದರೆ ಆಯ್ತು, ಬೂಟು ಎಲ್ಲಿದ್ದರೂ ಹೊರಗೆ ಬರುತ್ತವೆ’.

‘ಕಾಡಿನಲ್ಲಿ ಮೂಳೆ ಶೋಧನೆಯೇ ಮುಗಿದಿಲ್ಲ, ಕಾಡು ಪತ್ತೆಗೆ ಮತ್ತೊಂದು ಎಸ್ಐಟಿ ಮಾಡಿದ್ದಾರೆ. ಈಗ ಬೂಟು ಹುಡುಕಲು ಹೊಸ ಎಸ್ಐಟಿ. ಸರಿಹೋಯ್ತು... ವಾಹಿನಿಗಳಿಗೆ ಸುದ್ದಿಯೋ ಸುದ್ದಿ, ರಾಜಕಾರಣಿಗಳಿಗೆ ಸುಗ್ಗಿಯೋ ಸುಗ್ಗಿ!’.

‘ಊರ ಉಸಾಬರಿಯಲ್ಲೇ ನಿಮ್ಮ ಆಯುಷ್ಯ ಮುಗಿಯಿತು. ಮನೆಯವರ ಬಗ್ಗೇನೂ ಯೋಚಿಸಿ’.

‘ನಿನಗೇನಮ್ಮಾ ಕಡಿಮೆಯಾಗಿದೆ? ವರಮಹಾಲಕ್ಷ್ಮೀ ಹಬ್ಬಕ್ಕೆ ಹತ್ತು ಸಾವಿರದ ಸೀರೆ, ಅಕ್ಷಯ ತೃತೀಯಕ್ಕೆ ಚಿನ್ನ, ಗೌರಿಹಬ್ಬಕ್ಕೆ ಬಾಗಿನ, ಊರುಜಾತ್ರೆಗೆ ಕೈತುಂಬಾ ಬಳೆ... ಇನ್ನೇನು ಬೇಕು?’

‘ಅದೆಲ್ಲಾ ಸರಿ, ನಮ್ಮ ರೊಮ್ಯಾಂಟಿಕ್ ಪೇಯ್ನ್ ಯಾರಿಗೆ ಹೇಳಿಕೊಳ್ಳೋಣ…?’

‘ಅಯ್ಯಯ್ಯೋ... ನಿನಗ್ಯಾಕೇ ಈ ವಯಸ್ಸಿನಲ್ಲಿ ರೊಮ್ಯಾಂಟಿಕ್ ಪೇಯ್ನು…?’ ಎನ್ನುತ್ತಲೇ ತಿಂಗಳೇಶ ಉತ್ತೇಜಿತನಾದ!

‘ನಿನ್ನೆ ಮಂಡೆನೋವು ಅಂತ ಡಾಕ್ಟರ ಹತ್ತಿರ ಹೋಗಿದ್ದೆ, ಈ ಪೇಯ್ನು ವಯಸ್ಸಾದವರಿಗೇ ಬರೋದಂತೆ. ಅದೇನೇನೋ ವಿವರಿಸಿದರು, ನನಗೇನೂ ಅರ್ಥವಾಗಲಿಲ್ಲ’.

‘ಅವನ್ಯಾರೋ ಪ್ರಣಯಾಂತಕ ಡಾಕ್ಟರು ಇರಬೇಕು’.

‘ಅಪ್ಪಾ... ನೀನೇನೂ ಖುಷಿ ಪಡಬೇಡ. ಅಮ್ಮನಿಗೆ ಬಂದಿರೋದು ಕೀಲುಗಳ ರುಮ್ಯಾಟಿಕ್ ಪೇಯ್ನ್’ ಎಂದು ಅಪ್ಪನ ಉತ್ಸಾಹ ಠುಸ್ಸೆನಿಸಿದ ಮಗ! 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.