ADVERTISEMENT

ಚುರುಮುರಿ: ಸಂಕ್ರಾಂತಿ ಫಲಗಳು

ಲಿಂಗರಾಜು ಡಿ.ಎಸ್
Published 10 ಜನವರಿ 2022, 19:30 IST
Last Updated 10 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

2022ರ ಸಂಕ್ರಾಂತಿಯಲ್ಲಿ ಮಿಶ್ರ ಎಂಬ ಹೆಸರಿನ ಸಂಕ್ರಾಂತಿ ಪುರುಷನು ನಮೋ-ನಮೋ ಎನ್ನುತ್ತಾ ಹಸಿರು ಉಡುಗೆಯನ್ನು ಧರಿಸಿ ಕೈಯ್ಯಲ್ಲಿ ಧ್ವಜ ಮತ್ತು ಇವಿಎಂಗಳನ್ನು ಹಿಡಿದು ಶಾ-ರ್ದೂಲ ಅಥವಾ ಹುಲಿವಾಹನನಾಗಿ ಪಂಚ ರಾಜ್ಯಗಳಿಗೆ ತೆರಳುತ್ತಾನೆ. ರಾಜ್ಯಗಳ ಚುನಾವಣೆಯ ಮೇಲೆ ರೈತರ ಹಸಿರು ಪ್ರಭಾವ ದಟ್ಟವಾಗಿ ಬೀಳುವುದರೊಂದಿಗೆ ಪಕ್ಷಗಳಿಗೆ ಮಿಶ್ರ ಫಲ ಸಾಧ್ಯತೆಗಳು ಗೋಚರಿಸುತ್ತಿವೆ. ಸಂಕ್ರಾಂತಿ ಪುರುಷ ಕುಂಕುಮ ಮತ್ತು ಕೇಸರಿ ವಸ್ತ್ರ ಧರಿಸಿರುವುದರಿಂದ ಅವುಗಳ ಪ್ರಾಬಲ್ಯ ಹೆಚ್ಚಲಿದೆ. ಬೆಳ್ಳಿ ಮತ್ತು ಚಿನ್ನ ಗಗನಗಾಮಿಯಾಗಲಿವೆ.

ರಾಜಕಾರಣಿಗಳು ಜನೋದ್ಧಾರಕ್ಕಾಗಿ ಪರದೂಷಣ ಮಂತ್ರ ಜಪಿಸತೊಡಗುತ್ತಾರೆ. ರ್‍ಯಾಲಿ, ಸಭೆ–ಸಮಾರಂಭ, ಪಾದಯಾತ್ರೆಗಳಿಂದಾಗಿ ಜನರಿಗೆ ಉಚಿತ ಸೋಂಕು ಹಂಚಿಕೆ ಹೆಚ್ಚುವುವು. ನಾಯಕರಿಗೆ ಪಾದಗಳಲ್ಲಿ ಬಾವು, ಜ್ವರ ಸಂಭವ. ಮತಬಾಧೆ ನಿವಾರಣೆಗೆ ಚುನಾವಣೆಗಳಲ್ಲಿ ಬೂತುಚೇಷ್ಟೆ, ಬೂತುಬಲಿ ಪ್ರಸಂಗಗಳು ಹೆಚ್ಚಲಿವೆ. ಸ್ವಪಕ್ಷಗಾರರಿಗೆ ಅನುದಾನಗಳು ಹೆಚ್ಚುವುದರಿಂದ ಸರ್ಕಾರಕ್ಕೆ ಆಯುರ್ದಾನ. ರಾಜ್ಯ ಮಂತ್ರಿಗಳಿಗೆ ಸ್ಥಾನ ಪಲ್ಲಟ ಭಯ. ಪಿತೃಪಕ್ಷದಿಂದ ಮುಖಾಬೆಲೆ ಹೆಚ್ಚಳಕ್ಕೆ ವಾದಪೂಜೆ. ಮಾತೃಪಕ್ಷದಿಂದ ವೃಥಾಶ್ರಮ.

ಕಂತ್ರಾಟುದಾರರ ಪರ್ಸೆಂಟೇಜ್ ಕಾಯಿಲೆಗೆ ನಾಯಕರು ಮಂದಕರ್ಣರಾಗಲಿದ್ದಾರೆ. ರಸ್ತೆ ಗುಂಡಿಗಾರಿಕೆ ಹೆಚ್ಚಿ ಪಾಲಿಕೆಗಳಿಗೆ ಹಬ್ಬ. ಹೊಸ ಅನುದಾನ ಭಾಗ್ಯ. ಲಂಚಕೋರರು, ಕ್ಯಾಶು ಮುಚ್ಚಿಡುವ ಮುಚ್ಚಿಷ್ಟರ ಎಸಿಬಿ, ಲೋಕಾಯುಕ್ತ ಕೇಸುಗಳಿಗೆ ಪಿಂಚಣಿ ಪ್ರಯೋಗ ಸಾಧ್ಯತೆ.

ADVERTISEMENT

ರೈತರಿಗೆ ಎಂದಿನಂತೆ ಒಣಬಡಿತ. ಖರ್ಚು, ಧನವ್ಯಯ, ಅಲ್ಪಲಾಭ. ಬಡಭರತರಿಗೆ ಬೆಲೆ ಹೇರಿಕೆ, ಜಿಎಸ್‍ಟಿ ಸಂಕಟ. ಕಚೇರಿಗಳಲ್ಲಿ ಕ್ಯಾಶುಪತಾಸ್ತ್ರ ಪ್ರಯೋಗದಿಂದ ವಿತ್ತಭ್ರಮೆ. ಬಂದ್, ಕರ್ಫ್ಯೂಗಳಿಂದಾಗಿ ಜನತೆಗೆ ಶಾಶ್ವತ ಗ್ರಹಣ ಬಾಧೆ.

ಕೊರೊನಾ ವೈರಸ್, ಡೆಲ್ಟಾಗಳಿಗಿಂತ ರಾಜಕಾರಣಿಗಳ ಮಂಗನ್ಯಾಸ ಹೆಚ್ಚು ಅಪಾಯಕಾರಿಯಾಗಲಿದೆ. ರೋಗಬಾಧೆಗಳಿಂದ ಪಾರಾಗಲು ಓಮಿಕ್ರಾಯ ನಮಃ, ಓಂ ಕೋವಿಡಾಯ ನಮಃ, ಹೋಂ ಕ್ವಾರಂಟೈನಾಯನಮಃ ಎಂಬ ಗ್ರಹಶಾಂತಿ ಜಪ ಉತ್ತಮವು.

ಓಂ ಸುಖಃಪ್ರಾರಬ್ಧ ಪ್ರಾಪ್ತಿರಸ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.