ADVERTISEMENT

ಚುರುಮುರಿ | ಸಂಸ್ಕೃತಿ ರಕ್ಷಕರು

ಸುಮಂಗಲಾ
Published 12 ಮಾರ್ಚ್ 2023, 22:19 IST
Last Updated 12 ಮಾರ್ಚ್ 2023, 22:19 IST
   

ಸಂತೆಗೆ ಹೊರಟಿದ್ದ ಬೆಕ್ಕಣ್ಣ ಜೇಬಿಗೆ ಒಂದೆರಡು ಬಿಂದಿ ಪ್ಯಾಕೆಟ್ ತುರುಕಿಕೊಂಡಿತು. ನಾನು ಏನಿದೆಂದು ಹುಬ್ಬೇರಿಸಿದೆ.

‘ಮೊನ್ನೆ ನಮ್ಮ ಸಂಸದ ಮುನಿಸ್ವಾಮಣ್ಣ ಅಂಗಡಿ ಹೆಣ್‌ಮಗಳೊಬ್ಬರಿಗೆ ಯಾಕಮ್ಮಾ ಬೋಳು ಹಣ್ಯಾಗೆ ಇದೀಯ ಅಂತ ಜೋರು ಮಾಡ್ಯಾರೆ. ನಮ್ಮ ಸರ್ಕಲ್ಲಿನ ಸಂತಿವಳಗ ತರಕಾರಿ ಮಾರೋ ಹೆಣ್‌ಮಕ್ಕಳು ಒಮ್ಮೊಮ್ಮಿ ಕುಂಕುಮ ಇಟ್ಟುಕೊಳ್ಳಾದು ಮರತಿರತಾರ. ಯಾರರ ಗಣ್‌ಮಕ್ಕಳು ಬಂದು ಸುಮ್ಮನೆ ವದರಾಡತಾರ. ಅದಕ್ಕೇ ಹೆಣ್‌ಮಕ್ಕಳಿಗೆ ಕೊಡೂಣು ಅಂತ. ನೀನೂ ಆಫೀಸಿಗೆ ಹೋಗೂ ಅವಸರದಾಗೆ ಬಿಂದಿ ಮರೀತಿ... ಒಂದು ಪಾಕೀಟು ಇಟ್ಟುಕೋ’ ಎನ್ನುತ್ತ ನನ್ನ ಪರ್ಸಿನೊಳಗೆ ಒಂದು ತೂರಿಸಿತು.

‘ಮಂಗ್ಯಾನಂಥವನೇ... ಹೆಣ್‌ಮಕ್ಕಳು ಕುಂಕುಮ ಯಾಕಿಟ್ಟಿಲ್ಲ ಅಂತ ವದರಾಡಲೆಂದು ಸಂಸದರನ್ನು ಆಯ್ಕೆ ಮಾಡತೀವೇನು? ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಸತ್ತಿನವಳಗ ದನಿ ತೆಗೀಲಿ, ಸಂಸದರ ನಿಧಿ ಬಳಸಿಕೊಂಡು ಕ್ಷೇತ್ರಾಭಿವೃದ್ಧಿ ಮಾಡಲಿ ಅಂತ ಆರಿಸಿ ಕಳಿಸತೀವಿ. ಕುಂಕುಮ, ಬಳೆ ನೋಡೂದು ಬಿಟ್ಟು ಅವರು ತಮ್ಮ ಜಿಲ್ಲೆವಳಗ ದುಡಿಯೋ ಹೆಣ್‌ಮಕ್ಕಳ ಆರೋಗ್ಯ ಕಾಪಾಡಕ್ಕೆ ಸರ್ಕಾರ ಏನು ಮಾಡೈತಿ ಅಂತ ನೋಡಲಿ. ಕೋಲಾರದಾಗೆ ಕುಡಿಯೋ ನೀರಿನಾಗೆ ಫ್ಲೋರೈಡ್ ಅಂಶ ಎಷ್ಟ್ ಜಾಸ್ತಿ ಐತೆ, ಅದಕ್ಕೆ ಏನು ಮಾಡತೀರಂತ ನಿಮ್ಮ ಸಂಸದರಿಗೆ ಕೇಳಲೇ’ ಎಂದು ನಾನೂ ದಬಾಯಿಸಿದೆ.

ADVERTISEMENT

‘ಆರೋಗ್ಯ, ಅಭಿವೃದ್ಧಿ ಹಿಂತಾದಕ್ಕೆಲ್ಲ ಮಂದಿ ಸ್ವಂತ ಜವಾಬ್ದಾರಿ ತಗಬಕು. ಸಂಸದರು, ಶಾಸಕರು ಇರೂದು ಸಂಸ್ಕೃತಿ ಕಾಪಾಡಕ್ಕೆ, ಅವರು ಸಂಸ್ಕೃತಿ ರಕ್ಷಕರು. ಅದನ್ನು ಮೊದಲು ತಿಳಕೋ’ ಬೆಕ್ಕಣ್ಣ ಉಡಾಫೆಯಿಂದ ಹೇಳಿತು.

‘ನಮ್ಮ ದೇಹನೂ ಸ್ವಂತದ್ದು ಕಣಲೇ... ಕುಂಕುಮ ಇಡೂದು, ಬಿಡೂದೂ ಅವರವರ ಇಷ್ಟ, ಹೌದಿಲ್ಲೋ?’

ನನ್ನ ವಾದಕ್ಕೆ ಬೆಕ್ಕಣ್ಣ ಜಾಣಕಿವುಡು ನಟಿಸುತ್ತ, ‘ಹೋಗ್ಲಿ ಬಿಡು, ಹಾಲಿ ಶಾಸಕರು, ಭಾವೀ ಶಾಸಕರು ಸೀರಿಗೀರಿ, ಏನೇನೋ ಉಡುಗೊರೆ ಹಂಚತಾರಂತ, ಭೋಜನಕೂಟ ಮಾಡ್ತಾರಂತ. ಎಲ್ಲೆಲ್ಲಿ ಏನೇನು ಐತೆ ನೋಡಿ, ಒಂದ್ ರೌಂಡ್ ಹೋಗಿಬರೂಣೇನು?’ ಎಂದು ಹೆಹ್ಹೆಗುಟ್ಟಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.