ADVERTISEMENT

ಚುರುಮುರಿ: ಫ್ಯಾಟ್ ಚಾಲೆಂಜ್!

ಬಿ.ಎನ್.ಮಲ್ಲೇಶ್
Published 28 ಫೆಬ್ರುವರಿ 2025, 0:26 IST
Last Updated 28 ಫೆಬ್ರುವರಿ 2025, 0:26 IST
   

‘ಲೇ ತೆಪರ, ರಾಜ್ಯದಾಗೆ ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷರುಗಳು ಚೇಂಜ್ ಆಗ್ತಾರೆ ಅಂತೀಯ? ಎಷ್ಟು ಗದ್ಲ ನಡೆದ್ರೂ ಹೈಕಮಾಂಡ್‌ಗಳು ಯಾಕೆ ಪಿಟಿಕ್ಕಂತಿಲ್ಲ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.

‘ಏನೋಪ್ಪ, ಏನೂ ತಿಳೀತಿಲ್ಲ. ನಮ್ ಬಂಡೆ ಮೇಲೆ ಹೂವು ಕುಂತಂಗೆ ಕಾಣುಸ್ತತಿ, ಹೂವಿನ ಪಕ್ಷದಲ್ಲಿ ದಳಗಳೆಲ್ಲ ದಿಕ್ಕಾಪಾಲಾಗಿ ದಾವು. ಅಧಿವೇಶನ ಆದ ಮೇಲೆ ಎಲ್ಲ ನಿಚ್ಚಳ ಆಗಬೋದು ಅನ್ಸುತ್ತೆ’ ಎಂದ ತೆಪರೇಸಿ.

‘ಅಲ್ಲ, ಅಧಿವೇಶನದಾಗೆ ಎಮ್ಮೆಲ್ಲೆಗಳು ನಿದ್ದಿ ಮಾಡಾಕೆ ಅದೆಂಥದೋ ಮಲಗೋ ಕುರ್ಚಿ ತರ್ಸಿದಾರಂತೆ?’ ಮಂಜಮ್ಮ ಕೇಳಿದಳು.

ADVERTISEMENT

‘ಏಯ್, ಅಧಿವೇಶನದಾಗೆ ನಿದ್ದಿ ಮಾಡಾಕಲ್ಲ, ಮಧ್ಯಾಹ್ನ ಊಟ ಆದ ಮೇಲೆ ಒಂದು ಜಂಪ್ ಹಂಗೇ ಕಣ್ಣು ಮುಚ್ಚಾಕೆ ಅಷ್ಟೆ’ ಗುಡ್ಡೆ ತಿದ್ದಿದ.

‘ಅಂದ್ರೇ ಮಲಗೋರಿಗೆ ಚಾಪಿ ಹಾಸಿ ಕೊಟ್ಟಂಗಾತು. ಸರ್ಕಾರ ಭರ್ಜರಿ ಗೊರಕಿ ಹೊಡೀಬಹುದು’ ಮಂಜಮ್ಮ ನಕ್ಕಳು.

‘ನಮ್ದು ಹಂಗಿರ್‍ಲಿ, ನಿಮ್ ಮೋದಿ ಸಾಹೇಬ್ರು ಅದೇನೋ ‘ಫ್ಯಾಟ್ ಚಾಲೆಂಜ್’ ಹಾಕ್ಯಾರಂತೆ, ಏನದು?’ ಗುಡ್ಡೆ ಕೇಳಿದ.

‘ಫ್ಯಾಟ್ ಚಾಲೆಂಜ್ ಅಂದ್ರೆ ನಿನ್ನ ಈ ದಪ್ಪ ಹೊಟ್ಟಿ ಐತಲ್ಲ, ಅದ್ನ ಕರಗಿಸೋದು ಅಂತ’.

‘ಅದಕ್ಕೆ ಏನ್ ಮಾಡ್ಬೇಕು?’

‘ಎಣ್ಣಿ ಕಡಿಮಿ ಮಾಡ್ಬೇಕು’.

‘ಎಣ್ಣಿನಾ? ಸಾಧ್ಯ ಇಲ್ಲ, ನಾವು ತಗಳ್ಳಾದೇ ನೈನ್ಟಿ, ಅದ್ನೂ ಕಡಿಮಿ ಮಾಡು ಅಂದ್ರೆ?’ ಗುಡ್ಡೆ ತಲೆ ಒಗೆದ.

‘ಏನ್ ಮಬ್ಬದೀಯಲೆ, ಆ ಎಣ್ಣಿ ಅಲ್ಲ, ಅಡುಗಿ ಎಣ್ಣಿ. ಮಿರ್ಚಿ, ಬೋಂಡಾ ಹಾಳು ಮೂಳು ತಿಂತೀಯಲ್ಲ, ಅದನ್ನ ಕಡಿಮಿ ಮಾಡು ಅಂತ’ ತೆಪರೇಸಿ ಬಿಡಿಸಿ ಹೇಳಿದ.

‘ಅದೂ ಕಷ್ಟ, ಸೈಡ್ಸ್ ಇಲ್ಲ ಅಂದ್ರೆ ಹೆಂಗೆ?’

‘ಹಂಗಾದ್ರೆ ನೀನು ಫ್ಯಾಟ್ ಚಾಲೆಂಜ್ ಅಲ್ಲ, ‘ಪ್ಯಾಂಟ್ ಚಾಲೆಂಜ್’ ಮಾಡಬೇಕಾಗ್ತತಿ’.

‘ಅಂದ್ರೆ?’

‘ನಿನ್ನ ಈ ದಪ್ಪ ಹೊಟ್ಟಿ ಮೇಲೆ ಪ್ಯಾಂಟ್ ನಿಲ್ಲುತ್ತೆ ಅಂತ ಪ್ರೂವ್ ಮಾಡಬೇಕಾಗ್ತತಿ’ ತೆಪರೇಸಿ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.