ADVERTISEMENT

ಚುರುಮುರಿ | ಬಂಪರ್ ಭಾಗ್ಯ

ಸಿ.ಎನ್.ರಾಜು
Published 31 ಮೇ 2023, 19:56 IST
Last Updated 31 ಮೇ 2023, 19:56 IST
   

‘ಕರೆಂಟ್ ಬಿಲ್ ಕಟ್ಟಲ್ಲ, ಬಸ್ ಟಿಕೆಟ್ ಮುಟ್ಟಲ್ಲ ಅಂತ ಗ್ಯಾರಂಟಿ ಭಾಗ್ಯದ ಭಾವಿ ಭಾಗ್ಯವಂತರು ಜೋರು ಮಾಡ್ತಿದ್ದಾರೆ ಕಣ್ರೀ...’ ಎಂದಳು ಅನು.

‘ಗ್ಯಾರಂಟಿ ಭಾಗ್ಯಗಳನ್ನು ಬೇಗ ಜಾರಿ ಮಾಡಬೇಕು ಅಂತ ಭಾಗ್ಯವಂತರಿಗಿಂತ ವಿರೋಧ ಪಕ್ಷದವರೇ ಆತುರ ಪಡ್ತಿದ್ದಾರಂತೆ. ಭಾಗ್ಯಗಳು ಜಾರಿಯಾಗುತ್ತವೋ ಜಾರಿಹೋಗುತ್ತವೋ ಎಂದು ತಿಳಿಯುವ ಕಾತರವಂತೆ...’ ಅಂದ ಗಿರಿ.

‘ಕಾತರ, ಆತುರ ಬೇಡ. ಮಂತ್ರಿ ಭಾಗ್ಯ ಸಿಗದ ಹತಭಾಗ್ಯರಿಗೆ ನಿಗಮ, ಮಂಡಳಿಗಳಲ್ಲಿ ಪರ್ಯಾಯ ಭಾಗ್ಯ ಕೊಟ್ಟು, ಬೇಡವೆಂದವರಿಗೆ ಸಚಿವ ಸಂಪುಟದ ಮುಂದಿನ ಸಂಚಿಕೆಯಲ್ಲಿ ಮಂತ್ರಿ ಭಾಗ್ಯದ ಭರವಸೆ ನೀಡಿ, ಸರ್ಕಾರದಲ್ಲಿ ಶಾಂತಿ, ನೆಮ್ಮದಿ ನೆಲೆಯಾದ ನಂತರ ಸರ್ವ ಭಾಗ್ಯಗಳನ್ನೂ ಜಾರಿಗೆ ತರುತ್ತೇವೆ ಎಂದು ಸರ್ಕಾರಿ ನಾಯಕರು ಹೇಳಿದ್ದಾರೆ’.

ADVERTISEMENT

‘ಉಚಿತ ಭಾಗ್ಯಗಳಿಗೆ ಸರ್ಕಾರ ಹೇಗೆ ಹಣ ಹೊಂದಿಸುತ್ತದೆ? ದುಡ್ಡಿನ ಗಿಡ ಬೆಳೆಸುವುದೇ, ನೋಟು ಪ್ರಿಂಟ್ ಮಾಡುವುದೇ, ಬೆಲೆ ಏರಿಕೆ ಬರೆ, ತೆರಿಗೆ ಹೊರೆ ಹೇರುವುದೇ ಎಂಬ ಕುತೂಹಲವಂತೆ ವಿರೋಧ ಪಕ್ಷಗಳಿಗೆ’.

‘ಕಾಂಗ್ರೆಸ್ಸಿನ ಉಚಿತ ಭಾಗ್ಯಗಳ ದೆಸೆಯಿಂದ ತಾವು ಚುನಾವಣೆಯಲ್ಲಿ ಸೋಲುವಂತಾಯಿತು ಎಂದು ನೊಂದವರು, ಎಲೆಕ್ಷನ್ ಗೆಲುವಿಗೆ ಉಚಿತ ಭಾಗ್ಯಗಳೇ ಪ್ರಮುಖ ಅಸ್ತ್ರ ಎಂದು ನಂಬಿರುವವರು ಮುಂದಿನ ಚುನಾವಣೆಗಳಲ್ಲಿ ಭರಪೂರ ಭಾಗ್ಯಗಳ ಭರವಸೆ ನೀಡಿ, ಭಾಗ್ಯದಿಂದ ಸೋತ ಸೋಲನ್ನು ಭಾಗ್ಯದಿಂದಲೇ ಗೆಲ್ಲುವ ಪ್ರಯತ್ನ ಮಾಡಬಹುದು’.

‘ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಉಚಿತ ಭಾಗ್ಯಗಳನ್ನು ಘೋಷಣೆ ಮಾಡಬಹುದು’.

‘ಮಾಡಬಹುದು. ಪ್ರತಿ ಕುಟುಂಬಕ್ಕೆ ತಿಂಗಳಿಗೊಂದು ಗ್ಯಾಸ್ ಸಿಲಿಂಡರ್ ಉಚಿತ, ಪ್ರತಿ ದಿನ ಒಂದು ಲೀಟರ್ ಪೆಟ್ರೋಲ್ ಫ್ರೀ, ರೈಲಿನಲ್ಲಿ ದೇಶದಾದ್ಯಂತ ಉಚಿತ ಪ್ರಯಾಣ ಎನ್ನುವಂತಹ ಭರವಸೆಗಳನ್ನು ನೀಡಬಹುದೇನೋ, ಕಾದು ನೋಡೋಣ...’ ಅಂದಳು ಅನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.