ADVERTISEMENT

ಚುರುಮುರಿ | ಕುಟುಂಬ ಕಲ್ಯಾಣ

ಮಣ್ಣೆ ರಾಜು
Published 24 ಮೇ 2022, 19:15 IST
Last Updated 24 ಮೇ 2022, 19:15 IST
.
.   

ಶಾಸಕರ ಮನೆಯ ಕುಟುಂಬ ಕಲಹ ಹೊಸಿಲು ದಾಟಿತ್ತು. ಶಾಸಕರ ಪುತ್ರ ಮಾತೃಪಕ್ಷ ತ್ಯಜಿಸಿ ಶತ್ರುಪಕ್ಷಕ್ಕೆ ಸೇರ್ಪಡೆಯಾಗಿದ್ದ.

ಮಗನನ್ನೂ ಶಾಸಕನನ್ನಾಗಿ ಮಾಡಿ ತಮ್ಮೊಂದಿಗೆ ವಿಧಾನಸೌಧಕ್ಕೆ ಕರೆದೊಯ್ಯಬೇಕೆಂಬ ಕನಸು ಶಾಸಕರಿಗಿತ್ತು. ಅವರ ಪತ್ನಿಯು ಮಗನಿಗಾಗಿ ದೇವರಿಗೆ ಹರಕೆ ಹೊತ್ತಿದ್ದರು. ಮಗನೂ ಕಾರ್ಯಕರ್ತರನ್ನು ಸಂಘಟಿಸಿ ಪಕ್ಕದ ಕ್ಷೇತ್ರದಲ್ಲಿ ಕೃಷಿ ಮಾಡಲು ನೆಲ ಹಸನು ಮಾಡಿಕೊಂಡಿದ್ದ. ಆದರೆ, ಕುಟುಂಬಕ್ಕೊಂದು ರೇಷನ್ ಕಾರ್ಡ್ ರೀತಿ, ಕುಟುಂಬಕ್ಕೊಂದು ಟಿಕೆಟ್ ಅಂತ ಪಕ್ಷ ನಿರ್ಧಾರ ಮಾಡಿದ್ದು ಶಾಸಕರ ಕುಟುಂಬದ ಆಸೆಗೆ ತಣ್ಣೀರು ಎರಚಿದಂತಾಯ್ತು.

‘ರಾಜಕಾರಣದಿಂದ ನಿವೃತ್ತರಾಗಿ, ನನಗೆ ಟಿಕೆಟ್ ಕೊಡಿಸಿ’ ಎಂದು ಶಾಸಕರಿಗೆ ಪುತ್ರ ಗಂಟು ಬಿದ್ದಿದ್ದ.

ADVERTISEMENT

ತಮ್ಮ ಪದವಿಗೇ ಕುತ್ತು ಬಂದಿದ್ದನ್ನು ಶಾಸಕರು ಸಹಿಸಲಿಲ್ಲ. ‘ಮಕ್ಕಳಿಗೆ ಹಂಚಲು ಅಸೆಂಬ್ಲಿ ಸೀಟು ಪಿತ್ರಾರ್ಜಿತ ಆಸ್ತಿಯಲ್ಲ, ಬೇಕಾದ್ರೆ ಹಣ, ಆಸ್ತಿಯಲ್ಲಿ ಪಾಲು ಕೊಡ್ತೀನಿ’ ಎಂದು ಬಿಟ್ಟರು.

ತಂದೆ- ಮಗನ ಅಧಿಕಾರ ಜಗಳದಿಂದ ಶಾಸಕರ ಪತ್ನಿ ಅಪಾರ ನೊಂದರು. ಪತಿಯ ಪದವಿ ಉಳಿಸು, ಪುತ್ರನಿಗೆ ಪದವಿ ಕರುಣಿಸು ಎಂದು ಮನೆ ದೇವರಿಗೆ ತುಪ್ಪದ ದೀಪ ಹಚ್ಚಿದರು.

ಜಗಳ ವಿಕೋಪಕ್ಕೆ ತಿರುಗಿ, ಮಗ ಮನೆ ಬಿಟ್ಟು ಹೋಗ್ತೀನಿ ಅಂತ ಹೊರಟ. ತಡೆದು ನಿಲ್ಲಿಸಿದ ಶಾಸಕರ ಪತ್ನಿ, ‘ಮನೆ ಬಿಟ್ಟು ಹೋಗಬೇಡ, ಪಕ್ಷ ಬಿಟ್ಟು ಹೋಗು...’ ಅಂದರು.

ತಾಯಿಯ ಆಸೆ, ಆಜ್ಞೆಯಂತೆ ಮಗ ಪರಪಕ್ಷಕ್ಕೆ ಸೇರ್ಪಡೆಯಾಗಿ ಆ ಪಕ್ಷದಲ್ಲಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಲು ಸಿದ್ಧ
ನಾಗಿದ್ದಾನೆ.

ಒಂದು ಪಕ್ಷದಿಂದ ಒಂದೇ ಕುಟುಂಬದ ಇಬ್ಬರಿಗೆ ಟಿಕೆಟ್ ಇಲ್ಲ, ಆದರೆ, ಬೇರೆ ಪಕ್ಷದಿಂದ ಸ್ಪರ್ಧೆ ಮಾಡಬಹುದಲ್ಲವೇ?

ಮೇಲ್ನೋಟಕ್ಕೆ ಶಾಸಕರ ಮನೆಯಲ್ಲಿ ಕುಟುಂಬ ಕಲಹ, ಒಳನೋಟದಲ್ಲಿ ಅದು ಕುಟುಂಬ ಕಲ್ಯಾಣ...!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.