ADVERTISEMENT

ಚುರುಮುರಿ: ಆತ್ಮಾವಲೋಕನ

ಲಿಂಗರಾಜು ಡಿ.ಎಸ್
Published 14 ಮಾರ್ಚ್ 2022, 18:31 IST
Last Updated 14 ಮಾರ್ಚ್ 2022, 18:31 IST
   

ನಮ್ಮ ಸಂಘದ ಎಲೆಕ್ಷನ್ನಲ್ಲಿ ಹೂವಣ್ಣನ ಗುಂಪು ಭಾರಿ ಮೆಜಾರಿಟಿ ತಗಂಡುತ್ತು. ಸೋತು ಸುಣ್ಣಾಗಿದ್ದ ಕೈಯ್ಯೆಣ್ಣೆ ಗುಂಪು ಸಭೆ ಸೇರಿತ್ತು. ‘ಈ ಸಾರಿ ನಮ್ಮ ಗುಂಪು ನೀರಸವಾದ ಪ್ರದರ್ಶನ ನೀಡ್ಯದೆ ಅಂತ ಬೇಜಾರಾಗಬ್ಯಾಡಿ. ಎಲ್ಲಿ ಯಾಕೆ ತಪ್ಪಾಗ್ಯದೆ ಅಂತ ತಿಳಕಬಕು. ಮ್ಯಾಗಲ ಬೀದೀಲಿ ಹೂವಣ್ಣನಿಗೆ ಮೆಜಾರಿಟೀನೆ ಬಂದುಲ್ಲ’ ಹಿರಿಯ ನಾಯಕರು ಕಾರ್ಯಕರ್ತರಿಗೆ ಕರೆ ಕೊಟ್ಟರು.

‘ಸಾ, ‘ಕೈಯ್ಯೆಣ್ಣೆದು ಪರ್ಸೆಂಟೇಜ್ ಗುಂಪು, ಕಿತ್ತಾಡದು ಬುಟ್ರೆ ಕೆಲಸಿಲ್ಲ’ ಅಂತರೆ ಸದಸ್ಯರು!’ ಇನ್ನೊಬ್ಬ ನಾಯಕರು ಹೇಳಿದರು.

‘ಹೂವಣ್ಣರು ಎತ್ತಾರಾಗ್ಯವರೆ, ಜನದ ಕಣ್ಣಿಗೆ ಸುಲಭವಾಗಿ ಕಾಣಿಸಿಗ್ಯತ್ತರೆ ಅನ್ನದ್ಕೇ ನಾವು ಸೋತಿರದು. ಹೂವಣ್ಣಾರು ನಮ್ಮುನ್ನ ನೋಡಿ ಭಾರಿ ಹೆದರವರೆ ಕನ್ರಿ!’ ಹಿರಿಯ ನಾಯಕರು ಸಮಾಧಾನ ಮಾಡಿದರು.

ADVERTISEMENT

‘ಹೂವಣ್ಣಾರ ರಾಜಾಹುಲಿ ಎಲ್ಲಾ ಬೀದೀಲು ಪ್ರವಾಸ ಮಾಡಿ ಮೆಜಾರಿಟಿ ಸೀಟು ಗೆದ್ದು ನಮ್ಮುನ್ನೆಲ್ಲ ದೂಳೀಪಟ ಮಾಡ್ತೀವಿ ಅಂದದೆ!’ ಒಬ್ಬರು ಭಯಪಟ್ಟರು.

‘ಹೋದಸಾರಿ ಕಣ್ಣಗೆ ನೀರಾಕ್ಕ್ಯಂಡು ರಾಜೀನಾಮೆ ಕೊಟ್ಟುದ್ದ ನೀವು ಕಾಣ್ರಾ? ನಾನೂ ನಾಯಕ ಅಂತ ತೋರಿಸಕ್ಕೆ ಅಬ್ಬರ ಮಾಡ್ತಾವ್ರೆ’ ಅಂತಂದ್ರು ಇನ್ನೊಬ್ರು. ‘ನಮ್ಮ ಕೇಂದ್ರ ಕೈಯ್ಯೆಣ್ಣೆ ನಾಯಕರೂ ರಾಜೀನಾಮೆ ಕೊಟ್ಟು ಹೊಯ್ತೀವಿ ಅಂದಿದ್ರಲ್ಲ ಏನಾಯ್ತು?’ ಇನ್ನೊಬ್ಬ ನಾಯಕರ ಪ್ರಶ್ನೆ.

‘ಅವರೇ ಮುಂದುವರಿತರೆ. ಅವರಾದ್ರೆ ನಾವು ಎಷ್ಟು ಕಿತ್ತಾಡಿಕ್ಯಂಡ್ರೂ ಸುಮ್ಮಗಿರತರೆ! ಅವುರುನ್ನೆ ಮತ್ತೆ ನಾಯಕರನ್ನ ಮಾಡಿಕ್ಯಂಡ್ರೆ ಊರಿಗೊಂದು ಮೆರೆ ದೇವ್ರಿದ್ದಂಗೆ ಹಂಗಾಮಿ ಯಾಗಿ ಇರತರೆ’ ಅಂದ್ರು ದೊಡ್ಡ ನಾಯಕರು.

‘ಸೋತುದ್ದು ಯಾಕೆ ಅಂತ ಆತ್ಮಾವಲೋಕನ ಮಾಡಿಕ್ಯಳ್ರೋ ಅಂದ್ರೆ ಇಲ್ಲುದ್ದ ಪುಲಾರ ಮಾತಾಡ್ತಿದೀರ, ಅಡ್ರಸ್ಸಿಲ್ದಂಗೋಯ್ತಿರ’ ಅಂದ್ರು ಬುದ್ಧಿಜೀವಿಗಳು.

‘ಅಣೈ, ರಾಜಕೀಯದೇಲಿ ಆತ್ಮಾವಲೋಕನ ಮಾಡಿಕ್ಯಣಕೆ ಆತ್ಮ ಇರಬೇಕಲ್ಲುವ್ರಾ. ಅದುನ್ನ ಗಾಂಧಿಮಾತ್ಮರೇ ತಗಂಡು ಹೊಂಟೋಗ್ಯವರೆ!’ ಅಂತ ಒಬ್ಬರು ಅಕ್ಸಲಾ ಮಾಡುವಾಗ ಮಸಾಲೆ ದೋಸೆ ಬಂದು ಸಭೆಯ ಅಜೆಂಡಾ ಬದಲಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.