ADVERTISEMENT

ಚುರುಮುರಿ: ಸ್ವಾತಂತ್ರ್ಯ ಬೇಕು!

ಗುರು ಪಿ.ಎಸ್‌
Published 14 ಆಗಸ್ಟ್ 2022, 21:13 IST
Last Updated 14 ಆಗಸ್ಟ್ 2022, 21:13 IST
   

‘ಯಾಕ್ರೀ, ವಾಟ್ಸ್‌ಆ್ಯಪ್‌ ಡೀಪಿ ಚೇಂಜ್ ಮಾಡ್ಕೊಂಡಿದೀರಿ’ ಪೊಲೀಸ್ ಆಫೀಸರ್ ರೀತಿ ಕೇಳಿದಳು ಹೆಂಡತಿ.

‘ಅಯ್ಯೋ, ಡೀಪಿ ಚೇಂಜ್‌ ಮಾಡಿಕೊಳ್ಳೋವಷ್ಟೂ ಸ್ವಾತಂತ್ರ್ಯ ಇಲ್ಲವಾ ನನಗೆ...’ ಸಿಟ್ಟಿನಲ್ಲೇ ಕೇಳಿದೆ.

‘ಡೀಪಿ ಚೇಂಜ್ ಮಾಡಲೇಬಾರದು ಅಂತ ಅಲ್ಲ... ಮೊದಲು ನನ್ನ ಫೋಟೊ ಹಾಕ್ಕೊಂಡಿದ್ದವರು, ಈಗ ಜೈಲಿನ ಸರಳುಗಳ ಚಿತ್ರ ಹಾಕ್ಕೊಂಡಿದೀರಲ್ಲ ಅದರರ್ಥ ಏನು ಅಂತ?’

ADVERTISEMENT

‘ದೇಶಕ್ಕೆ ದೇಶವೇ ಅಮೃತ ಮಹೋತ್ಸವದ ಸಡಗರದಲ್ಲಿದ್ದರೆ, ನನಗೆ ಮಾತ್ರ ಇನ್ನೂ ನಿನ್ನಿಂದ ಸ್ವಾತಂತ್ರ್ಯ ಸಿಕ್ಕಿಲ್ಲ ಅಂತ...’

‘ಹೌದು ಬಿಡಿ, ನಿಮಗಷ್ಟೇ ಅಲ್ಲ ತುಂಬಾ ಜನರಿಗೆ ಇನ್ನೂ ಸ್ವಾತಂತ್ರ್ಯ ಸಿಗಬೇಕಿದೆ...’

‘ಹಾಗಂದ್ರೇನುಮಾರಾಯ್ತಿ?’

‘ನೋಡಿ, ನಮ್ ರಾಜಕೀಯ ನಾಯಕರಿಗೇ ಇನ್ನೂ ಕೆಲವು ವಿಚಾರಗಳಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ. ಅಧಿಕಾರ ಇಲ್ಲದಿರೋ ಲೀಡರ್ಸ್‌ಗೆ ಮುಂದಿನ ಸಿಎಂ ನಾನೇ ಅಂತ ಹೇಳೋ ಸ್ವಾತಂತ್ರ್ಯ ಸಿಕ್ಕಿಲ್ಲ. ಅಧಿಕಾರ ಇರೋ ನಾಯಕರಿಗೆ, ಹಿಂದಿ ಭಾಷೆಗಿಂತ ಕನ್ನಡವೇ ಮೇಲು ಅಂತ ಧೈರ್ಯವಾಗಿ ಹೇಳೋ ಸ್ವಾತಂತ್ರ್ಯ ಇಲ್ಲ...’ ವೇದಾಂತಿಯಂತೆ ಹೇಳತೊಡಗಿದಳು.

‘ಏನು, ಫ್ಲ್ಯಾಗ್‌ಗಳನ್ನ ಮಾರಾಟ ಮಾಡೋದು ಬಿಟ್ಟು, ರಾಜಕೀಯ ಎಲ್ಲ ಮಾತಾಡೋದು ಕಲಿತುಬಿಟ್ಟಿದೀಯ...’

‘ಅಪ್‌ಡೇಟ್ ಆಗಬೇಕ್ರಿ. ನಿಮ್ಮಂಗೆ ಬರೀ ಮನೆ, ಮಕ್ಕಳು, ಆಫೀಸು, ಕೆಲಸ ಅಂತ ಯೋಚಿಸ್ತಾ ಕೂತರೆ ದೇಶದ ಬಗ್ಗೆ ಯೋಚಿಸೋರು ಯಾರು?’ ವ್ಯಂಗ್ಯವಾಗಿ ತಿರುಗೇಟು ಕೊಟ್ಟಳು.

‘ನೀನು ದೊಡ್ಡ ದೇಶಪ್ರೇಮಿ ಅಂತ ಗೊತ್ತಾಯ್ತು ಬಿಡು. ಹೋಗ್ಲಿ, ಇಂಡಿಪೆಂಡೆನ್ಸ್‌ ಡೇ ಸ್ಪೆಷಲ್‌ ಏನು?’

‘ನಮ್ಮ ಕಸ್ಟಮರ್‌ಗಳಿಗೆ ವಿಶೇಷ ರಿಯಾಯಿತಿ ಕೊಡೋಣ ಅಂತ. ಪೇಪರ್‌ನಲ್ಲಿ ಆ್ಯಡ್ ಕೊಡ್ತೀನಿ, ಇಂಡಿಪೆಂಡೆನ್ಸ್‌ ಡೇ ಸೇಲ್‌ ಅಂತ...’

‘ಮಾರಾಯ್ತಿ, ಇಷ್ಟು ದಿನ ಸೇಲ್ ಮಾಡಿರೋದೇ ಸಾಕು, ಇರೋದನ್ನಾದರೂ ಉಳಿಸು’ ಎಂದೆ. ಇಬ್ಬರೂ ನಗಲಾರಂಭಿಸಿದೆವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.